ಜಿಲ್ಲೆ

ಡಿಜಿಟಲ್ ಗ್ರಂಥಾಲಯಕ್ಕೆ 5 ಲಕ್ಷ ಮಂದಿ ನೋಂದಣಿ

djtrupti

ಬೆಂಗಳೂರು: ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿದ ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಓದುಗರು ನೋಂದಾಯಿಸಿಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಗೆ ಕಾರಣವಾಗಿದ್ದಾರೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವರು, ಲಾಕ್‌ಡೌನ್ ಚಾಲ್ತಿಯಲ್ಲಿದ್ದ ಸಮಯದಲ್ಲಿ ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯದೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆ ಕೈಗೆತ್ತಿಕೊಂಡಿತ್ತು.
ರಾಜ್ಯದಾದ್ಯಂತ 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರಥಮ ಹಂತವಾಗಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ಸೆ.23ರವರೆಗೆ ರಾಜ್ಯಾದ್ಯಂತ ಒಟ್ಟು 5,02,512 ಸದಸ್ಯರು ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿಯಾಗಿದ್ದು, ಸಾರ್ವಜನಿಕರು ಬಹಳ ಪರಿಣಾಮಕಾರಿಯಾಗಿ ಇದರ ಪ್ರಯೋಜನವನ್ನು ಪಡೆಯುತ್ತಿರುವುದು ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಶೈಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ವಿಭಾಗಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದ ಇತ್ತೀಚಿನ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗಿದ್ದು ವಿಷಯವಾರು ಇ-ಕಂಟೆಂಟ್ ಗಳನ್ನು ನೂತನವಾಗಿ ಅಳವಡಿಸಲಾಗಿದೆ. ಈ ಉಪಕ್ರಮವು ಕನ್ನಡ, ಆಂಗ್ಲ, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಾಠಗಳನ್ನು ಒದಗಿಸುತ್ತದೆ. ರಾಜ್ಯ ಮತ್ತು ಸಿಬಿಎಸ್‌ಇ ಮಂಡಳಿಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಡಿಜಿಟಲ್ ರೂಪದಲ್ಲಿ ಮಾಹಿತಿಯನ್ನು ಸಹ ಒದಗಿಸುತ್ತದೆ. ಕಲೆ ಮತ್ತು ಮಾನವೀಯತೆ, ವ್ಯಕ್ತಿತ್ವಕೌಶಲ್ಯ ಮತ್ತು ಸಾಹಿತ್ಯವನ್ನು ಒಳಗೊಂಡಂತೆ ಶಾಲೆ, ಕಾಲೇಜು ಮುಂತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ಕನ್ನಡದಲ್ಲಿ ಸುಮಾರು 4200ಕ್ಕೂ ಹೆಚ್ಚು ಇ-ಪುಸ್ತಕಗಳಿಗೆ ಮತ್ತು ಕನ್ನಡ ಭಾಷೆಯಲ್ಲಿ ಸುಮಾರು 600 ಕ್ಕೂ ಹೆಚ್ಚು ವೀಡಿಯೋಗಳಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.