ಜಿಲ್ಲೆ

₹5 ಲಕ್ಷ ನಗದು, ₹3 ಲಕ್ಷದ ಒಡವೆ ಕಳವು

ಮೂರು ದಿನದಲ್ಲಿ 3 ಪ್ರಕರಣ ಬೆಚ್ಚಿದ ಬಾಗೇಪಲ್ಲಿ ಜನತೆ



ಬಾಗೇಪಲ್ಲಿ: ಪಟ್ಟಣ ಠಾಣೆ ವ್ಯಾಪ್ತಿಯ ಘಂಟಂವಾರಪಲ್ಲಿ ಗ್ರಾಮ ಪಂಚಾಯಿತಿಯ ಜಡಲಬೈರವೇಶ್ವರ ಸ್ವಾಮಿ ರಸ್ತೆಯಲ್ಲಿರುವ ಲಕ್ಷ್ಮೀನಾರಾಯಣ ಎಂಬುವರ ಮನೆಗೆ ನುಗ್ಗಿರುವ ದರೋಡೆಕೋರರು ಮನೆ ಮಾಲೀಕನಿಗೆ ಡಮ್ಮಿ ಪಿಸ್ತೂಲ್ ತೋರಿಸಿ ಬೆದರಿಸಿ, ಮನೆಯಲ್ಲಿದ್ದ ನಗದು ದೋಚಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ.
ಗುರುವಾರ ಮತ್ತೊಂದು ಪ್ರಕರಣದಲ್ಲಿ ಲಕ್ಷ್ಮೀನಾರಾಯಣ ಅವರ ಮನೆ ಎದುರು ವಾಸವಿರುವ ನವಾಜ್ ಅವರ ಮನೆಗೂ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ ಬೀರುವಿನಲ್ಲಿಟ್ಟಿದ್ದ 25 ಸಾವಿರ ರೂ., 35 ಗ್ರಾಂ ಚಿನ್ನದ ಒಡವೆ, ಮಹಿಳೆ ಧರಿಸಿದ್ದ 15 ಗ್ರಾಂ ಚಿನ್ನದ ಓಲೆಯನ್ನು ಕಿತ್ತು ಪರಾರಿಯಾಗಿದ್ದಾರೆ.
ಕಳ್ಳತನ ನಡೆದಿರುವ ಮನೆ ಸಮೀಪವೇ ವಾಸವಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಿ ಪ್ರಸಾದ್ ಎಂಬುವರು ಬ್ಯಾಂಕ್‌ನಲ್ಲಿ
ಶುಕ್ರವಾರ ಹಣ ಡ್ರಾ ಮಾಡಿ ದ್ವಿಚಕ್ರ ವಾಹನ ಡಿಕ್ಕಿಯಲ್ಲಿಟ್ಟಿದ್ದ 4.5 ಲಕ್ಷ ರೂ.ಗಳನ್ನು ನೋಡಿದ್ದ ಕಳ್ಳರು ಅವರನ್ನು ಹಿಂಬಾಲಿಸಿಕೊಂಡು ಬಂದು ದೋಚಿದ್ದಾರೆೆ. ಈ ದೃಶ್ಯ ಮಾರುಕಟ್ಟೆ ಆವರಣದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ ಮೂರು ದಿನಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಒಟ್ಟು 5 ಲಕ್ಷ ರೂ. ನಗದು, 3 ಲಕ್ಷ ರೂ. ಮೌಲ್ಯದ ಒಡವೆಗಳು ಕಳವಾಗಿದ್ದು, ಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದ್ದರೆ, ಪೊಲೀಸರಿಗೆ ತಲೆನೋವು ತಂದಿದೆ.
ಘಟನೆಗಳ ಸಂಬಂಧ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಕಾರು - ಜೀಪು ಜಖಂ
ಚಿಂತಾಮಣಿ: ನಗರ ಹೊರವಲಯದ ಬೆಂಗಳೂರು ರಸ್ತೆಯ ಯಂಗ್ ಸ್ಕೈ ಹೋಟೆಲ್ ಬಳಿ ಶುಕ್ರವಾರ ಸಂಜೆ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಕಾರು ಹಾಗೂ ಜೀಪಿನ ನಡುವ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡಿವೆ.
ಬೆಂಗಳೂರಿನ ಮಾರತ್‌ಹಳ್ಳಿಯ ಸೋಮಶೇಖರ್ ಅವರು ಬಾಡಿಗೆ ಕಾರಿನಲ್ಲಿ ಆಂಧ್ರದ ಮದನಪಲ್ಲಿಗೆ ಹೋಗುತ್ತಿದ್ದಾಗ ಬೈಪಾಸ್ ರಸ್ತೆಯಲ್ಲಿ ಹೋಗದೆ ಚಿಂತಾಮಣಿ ರಸ್ತೆಯಲ್ಲಿ ಚಲಿಸಿದ್ದಾರೆ. ನಂತರ ಬೈಪಾಸ್ ರಸ್ತೆಗೆ ತೆರಳುವ ಸಲುವಾಗಿ ಬೆಂಗಳೂರು ರಸ್ತೆಯಲ್ಲಿ ಯಂಗ್ ಸ್ಕೈ ಹೋಟೆಲ್ ಬಳಿ ಯುಟರ್ನ್ ತೆಗೆದುಕೊಳ್ಳುತ್ತಿದ್ದಾಗ ಚಿಂತಾಮಣಿಯಿಂದ ಬೆಂಗಳೂರು ರಸ್ತೆಯ ಸಂತೇಕಲ್ಲಹಳ್ಳಿಗೆ ಹೋಗುತ್ತಿದ್ದ ಜೀಪ್ ಡಿಕ್ಕಿ ಹೊಡೆದಿದೆ. ಎರಡು ವಾಹನಗಳು ರಸ್ತೆ ಪಕ್ಕದ ಗುಂಡಿಗೆ ಇಳಿದಿವೆ.
ಕಾರು ಮತ್ತು ಜೀಪ್‌ಗಳು ಜಖಂಗೊಂಡಿದ್ದು, ಎರಡೂ ವಾಹನಗಳಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ವಾಹನಗಳನ್ನು ಗುಂಡಿಯಿಂದ ಮೇಲೆತ್ತಲು ನೆರವಾಗಿದ್ದಾರೆ.