ಜಿಲ್ಲೆ

ಜಿಲ್ಲೆಯಿಂದ ಶೇ.5ರಷ್ಟು ರಫ್ತು ಪ್ರಮಾಣ ಹೆಚ್ಚಳ

ಮೈಸೂರು: ಜಿಲ್ಲೆಯಿಂದ ಪ್ರತಿ ವರ್ಷ ಶೇ.5ರಷ್ಟು ರಫ್ತು ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ತಿಳಿಸಿದರು.


ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಕೈಗಾರಿಕೆಗಳ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರಫ್ತು ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಿಂದ 2021-22ನೇ ಸಾಲಿನಲ್ಲಿ 6,100 ಕೋಟಿ ರೂ., 2022-23ರಲ್ಲಿ 6,300 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಪ್ತು ಮಾಡಿದ್ದು, ಪ್ರತಿ ವರ್ಷ ಶೇ.5ರಷ್ಟು ರಫ್ತು ಪ್ರಮಾಣ ಏರಿಕೆಯಾಗಿದೆ. ಪ್ರತಿ ಜಿಲ್ಲೆಯನ್ನು ರಫ್ತು ಹಬ್ ಆಗಿ ಮಾಡಬೇಕೆಂಬ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದರು.


ಜಿಲ್ಲೆಯಿಂದ 10 ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಎಲೆಕಟ್ರೆಾನಿಕ್ ಉತ್ಪನ್ನಗಳನ್ನು ರಫ್ತು ಮಾಡುವ ಆಲೋಚನೆ ಇದೆ ಎಂದರು.
ತಂಬಾಕು, ಟೆಕ್ಸ್‌ಟೈಲ್ ಉತ್ಪನ್ನ ಸೇರಿದಂತೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈಗ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತು ಮಾಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ವಸ್ತುಗಳನ್ನು ರಫ್ತು ಮಾಡಲಾಗುವುದು ಎಂದರು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಪ್ತು ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಈ ಸೌಲಭ್ಯಗಳನ್ನು ಉದ್ಯಮಿಗಳು ಬಳಸಿಕೊಳ್ಳಬೇಕು. ನಾವು ಯಾವ ದೇಶಕ್ಕೆ ಯಾವ ವಸ್ತುವನ್ನು ಕಳುಹಿಸಬೇಕು, ಯಾವ ದೇಶದಲ್ಲಿ ಯಾವ ಉತ್ಪನ್ನಕ್ಕೆ ಬೇಡಿಕೆ ಇದೆ ಎಂಬ ವಿಷಯವನ್ನು ಅರಿತುಕೊಳ್ಳಬೇಕು ಎಂದರು.


ರಫ್ತು ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಯ ಚಲನಶಕ್ತಿ. ಇದು ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡುತ್ತದೆ. ಮೈಸೂರು ಜಿಲ್ಲೆಯಿಂದ ಸುಮಾರು 80 ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಇದು ಹೆಚ್ಚಾಗುವುದರಿಂದ ಉದ್ಯಮಿಗಳು ಲಾಭ ಗಳಿಸಲು ಸಾಧ್ಯವಾಗಲಿದೆ ಎಂದರು.


ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ರಫ್ತು ಮಾಡುವ ಸಂದರ್ಭದಲ್ಲಿ ಅನೇಕ ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗುತ್ತವೆ. ನಮ್ಮ ಉತ್ಪನ್ನವನ್ನು ಖರೀದಿಸುವ ವ್ಯಕ್ತಿ ಮನಸ್ಥಿತಿ ಉತ್ತಮವಾಗಿರಬೇಕು, ಮಧ್ಯವರ್ತಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ರಫ್ತು ಹೆಚ್ಚಾಗಲು ಉತ್ಪಾದನೆ ಮಾಡುವ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿ ಇರಬೇಕು. ರಫ್ತು ಉದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ. ಮೈಸೂರು ರಫ್ತಿನ ತವರೂರು ಆಗಿದೆ ಎಂದು ಮಾಹಿತಿ ನೀಡಿದರು.


ರಫ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕಿ ಮೇಘಲಾ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಉಪನಿರ್ದೇಶಕ ಮನ್ಸೂರ್ ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.