ಎಚ್.ಡಿ.ಕೋಟೆ: ಪಟ್ಟಣದ ಪುರಸಭೆ ವ್ಯಾಪ್ತಿಯ ವ್ಯಾಪಾರಸ್ಥರಿಗೆ ಅದಾಲತ್ ಮೂಲಕ ಪರವಾನಗಿ ನೀಡುವುದು ಹಾಗೂ ಕಂದಾಯ ಪಾವತಿಸುವ ಜನಸಾಮಾನ್ಯರಿಗೆ ಶೇ.5ರಷ್ಟು ರಿಯಾಯಿತಿಯನ್ನು ಪುರಸಭೆ ವತಿಯಿಂದ ನೀಡಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷೆ ಶಿವಮ್ಮ ಚಾಕಹಳ್ಳಿ ಕೃಷ್ಣ ಮಾಹಿತಿ ನೀಡಿದರು.
ಪುರಸಭಾ ಕಚೇರಿ ಮುಂಭಾಗದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಪರವಾನಗಿ ಅದಾಲತ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಕೋಟೆ ಮತ್ತು ಹ್ಯಾಂಡ್‌ಪೋಸ್ಟ್‌ನಲ್ಲಿ ಪರವಾನಗಿ ಅದಾಲತ್ ಅನ್ನು ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಎಚ್.ಡಿ.ಕೋಟೆ ಪುರಸಭೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 750 ಅಂಗಡಿಗಳಿದ್ದು, ಪ್ರತಿಯೊಬ್ಬರೂ ಪರವಾನಗಿ ಪಡೆದುಕೊಂಡೇ ವ್ಯಾಪಾರ ಮಾಡಬೇಕು. ಇಲ್ಲದಿದ್ದರೆ ಪುರಸಭೆಯವರು ತಮ್ಮ ಅಂಗಡಿಗಳನ್ನು ಮುಚ್ಚಿಸುತ್ತಾರೆ ಎಂದು ಎಚ್ಚರಿಸಿದರು.
ಪುರಸಭೆಯ 23 ವಾರ್ಡ್‌ಗಳ ನಿವಾಸಿಗಳು ತಮ್ಮ ಮನೆಯ ನಿವೇಶನಗಳ ಕಂದಾಯಗಳನ್ನು ಏ.30ರೊಳಗೆ ಪಾವತಿಸಿದರೆ ಶೇ.5 ರಿಯಾಯಿತಿ ನೀಡಲಾಗುತ್ತಿದೆ. ತದನಂತರ ಪಾವತಿಸಿದ ನಿವಾಸಿಗಳಿಗೆ ದಂಡ ಕಟ್ಟುವ ಪರಿಸ್ಥಿತಿ ಎದುರಾಗಲಿದೆ. ಪರವಾನಗಿ ಪಡೆದು, ಸಕಾಲದಲ್ಲಿ ಕಂದಾಯ ಪಾವತಿಸಿದರೆ ಪುರಸಭೆಯಿಂದ ಪಟ್ಟಣದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸುರೇಶ್, ಉಪಾಧ್ಯಕ್ಷ ಆಸೀಫ್ ಇಕ್ಬಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಧುಕುಮಾರ್, ಮಾಜಿ ಅಧ್ಯಕ್ಷ ಎಂ.ಸಿ.ದೊಡ್ಡ ನಾಯಕ, ಸದಸ್ಯರಾದ ಸ್ಟುಡಿಯೋ ಪ್ರಕಾಶ್, ಸ್ವಾಮಿ, ಚಂದ್ರಶೇಖರ್ ಆರಾಧ್ಯ, ವಿನಯ್ ಭಜರಂಗಿ, ಚಾಕಹಳ್ಳಿ ಕೃಷ್ಣ, ಅಧಿಕಾರಿಗಳಾದ ರೇಷ್ಮಾ, ರಘು ನಾಯಕ್, ಪರಮೇಶ್, ಮಹದೇವಸ್ವಾಮಿ, ಯದು, ಶ್ರೀಧರ, ಶ್ರೀಕಂಠ, ಹರೀಶ್, ಕೃತಿಕ್ ಇದ್ದರು.