ಜಿಲ್ಲೆ

ಅನುಮಾನಾಸ್ಪದವಾಗಿ 5 ಹಸುಗಳ ಸಾವು

ಕಿರಣ್ ಗೌಡ.ಜಿ

ಹನೂರು: ತಾಲೂಕಿನ ಬಿದರಹಳ್ಳಿ ಗ್ರಾಮದ ಹೊರವಲಯದ ಹಾಲೇರಿ ಕೆರೆ ಬಳಿ ಕಳೆದ ಎರಡು ದಿನಗಳಿಂದ ಈಚೆಗೆ 5 ಹಸುಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಗ್ರಾಮದ ಪುಟ್ಟ ಎಂಬುವರು ಶುಕ್ರವಾರ ಹೊರವಲಯದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಆದರೆ ಸಂಜೆಯಾದರೂ ಮನೆಗೆ ಬಾರದ ಹಿನ್ನಲೆ ಹುಡುಕಾಟ ನಡೆಸಿದಾಗ ಹಾಲೇರಿ ಕರೆಯ ಬಳಿಯ ಅರಣ್ಯ ಪ್ರದೇಶದಲ್ಲಿ 2 ಹಸುಗಳು ಮೃತಪಟ್ಟಿದ್ದವು. ಹಾಗೆಯೇ ಶನಿವಾರ ಮೇಯಲು ಬಿಟ್ಟಿದ್ದ ಶಿವಣ್ಣ ಎಂಬುವರಿಗೆ ಸೇರಿದ 2 ಹಾಗೂ ಕುಮಾರ್ ಅವರ 1 ಹಸು ಈ ಭಾಗದಲ್ಲೇ ಮೃತಪಟ್ಟಿತ್ತು. ಇದರಿಂದ ಆತಂಕಗೊಂಡ ರೈತರು ಶಂಕೆ ವ್ಯಕ್ತಪಡಿಸಿ ಪಶು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು.

ಭಾನುವಾರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಆದರೆ ಹಸುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ರೈತರಲ್ಲಿ ಆತಂಕ ಮನೆ ಮಾಡಿದ್ದು, ಶಂಕೆ ವ್ಯಕ್ತವಾಗಿದೆ. ಮೃತಪಟ್ಟ ಹಸುಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಹಸುಗಳ ಸಾವು ಮೇಲ್ನೋಟಕ್ಕೆ ವಿಷಪೂರಿತ ಆಹಾರ ಸೇವೆನೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಹಸುಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದರು.