ಜಿಲ್ಲೆ

4ರಿಂದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ, ಸಂಸ್ಕೃತಿ ಕಮ್ಮಟ

ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ, ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠ ಸಹಯೋಗದಲ್ಲಿ ಮೇ 4 ರಿಂದ 6ರವರೆಗೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದಲ್ಲಿ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ, ಸಂಸ್ಕೃತಿ ಕಮ್ಮಟ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್.ಅಶೋಕ್ ತಿಳಿಸಿದರು.

ಅನುಭವಿ ತಜ್ಞರು ಕಮ್ಮಟದ ನೇತೃತ್ವ ವಹಿಸುತ್ತಿದ್ದು ಕಮ್ಮಟದಲ್ಲಿ, ನಾಟಕ, ಕವನ ರಚನೆ, ಕಥೆ ಕಟ್ಟುವುದು, ಸಂಗೀತ, ನೃತ್ಯ, ಚಿತ್ರಕಲೆ, ಯಕ್ಷಗಾನ, ಮಲ್ಲಕಂಬ ತರಬೇತಿ ಸೇರಿ ಮೂಲ ಜಾನಪದ ನೃತ್ಯ, ಜಾನಪದ ನೃತ್ಯ ಕಲೆಗಳ ಬಗ್ಗೆ ಉಚಿತ ತರಬೇತಿ ನೀಡಲಾಗುವುದು. ಊಟ, ವಸತಿ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದು ಪ್ರತಿ ಜಿಲ್ಲೆಯಿಂದ 25 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತ ಮಕ್ಕಳು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೇ 4ರಂದು ಶಾಸಕ ಸಿ.ಎನ್.ಬಾಲಕೃಷ್ಣ ಕಮ್ಮಟ ಉದ್ಘಾಟಿಸುವರು. ತರಳಬಾಳು ಮಠದ ಪೀಠಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖಾಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಮ್ಮಟದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್.ಅಶೋಕ್ ವಹಿಸಲಿದ್ದಾರೆ. ಮೇ 6 ರಂದು ಸಾಹಿತಿ ಯೋಗೇಶ್ ಸಹ್ಯಾದ್ರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹೂ.ವಿ.ಸಿದ್ದೇಶ್ ಹಗ್ಗದ ಮಲ್ಲಕಂಬ ಪ್ರದರ್ಶನ ಸೇರಿದಂತೆ ಯಕ್ಷಗಾನ, ಹರಿಕಥೆ, ಮಕ್ಕಳೇ ಬರೆದ ನಾಟಕಗಳ ಅಭಿನಯ ನಡೆಯಲಿದೆ. ಕಮ್ಮಟಕ್ಕಾಗಿ ರಾಜ್ಯದ ಇತರೆಡೆಗಳಿಂದ 400 ಮಕ್ಕಳು ಭಾಗವಹಿಸಲಿದ್ದು, ಈಗಾಗಲೇ 300 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಹಾಸನ ಜಿಲ್ಲೆಯಿಂದ 100 ಮಕ್ಕಳು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಾಧ್ಯಕ್ಷ ಸಿ.ಎಲ್.ಮಹದೇವ್, ಸಂಘಟನಾ ಕಾರ್ಯದರ್ಶಿಗಳಾದ ಸಿ.ಎಸ್.ಮನೋಹರ್, ಸಿ.ಎ.ಸಚಿನ್ ಇದ್ದರು.