ಮೈಸೂರು: ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಗರದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಡಿ.4ರಂದು ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೆಂದ್ರ, ಮೈವಿವಿ ರಾಷ್ಟ್ರೀಯ ಸೇವಾ ಯೋಜನೆ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಉತ್ಸವದಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಸೇರಿದಂತೆ 11 ಸ್ಪರ್ಧೆ ಏರ್ಪಡಿಸಲಾಗಿದೆ. 15 ರಿಂದ 29 ವರ್ಷ ವಯೋಮಿತಿಯ ಒಳಗೆ ಇರುವ ಜಿಲ್ಲೆಯ ಯುವಕ-ಯುವತಿಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಯಾಗಿರುವ ಯುವಕ-ಯುವತಿ ಸಂಘಗಳು ಹಾಗೂ ಮಂಡಳಿಗಳ ಪದಾಧಿಕಾರಿಗಳು ಸ್ಪರ್ಧಿಸಬಹುದು ಎಂದರು.
ವಿಷಯಾಧಾರಿತ ಸ್ಪರ್ಧೆಯಲ್ಲಿ ವಿಜ್ಞಾನ ಮೇಳ, ಜಾನಪದ ನೃತ್ಯ (ಗುಂಪು), ಜಾನಪದ ಗೀತೆ (ಗುಂಪು), ಜಾನಪದ ನೃತ್ಯ (ವೈಯಕ್ತಿಕ), ಜಾನಪದ ಗೀತೆ (ವೈಯಕ್ತಿಕ), ಜೀವನ ಕೌಶಲ ಸ್ಪರ್ಧೆ, ಕವಿತೆ ಬರೆಯುವುದು (ವೈಯಕ್ತಿಕ) ಕಥೆ ಬರೆಯುವುದು, ಚಿತ್ರಕಲೆ (ವೈಯಕ್ತಿಕ), ಭಾಷಣ (ವೈಯಕ್ತಿಕ), ಛಾಯಾಗ್ರಹಣ ಕಾರ್ಯಾಗಾರ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಇದೇ ಮೊದಲ ಬಾರಿ ಗುಡಿ ಕೈಗಾರಿಕೆಯ ಕಲಾ ಪ್ರಕಾರ, ನೇಕಾರಿಕೆ, ಜವಳಿ, ಕೃಷಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಈ ವಿಭಾಗಕ್ಕೆ ಸ್ಪರ್ಧೆ ಇರುವುದಿಲ್ಲ. ಈ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಲು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ನೀಡಲಾಗುತ್ತದೆ. ಪ್ರಥಮ ಸ್ಥಾನ ಪಡೆದವರು 2024-25ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ ಎಂದು ತಿಳಿಸಿದರು
ಯುವ ಜನೋತ್ಸವಕ್ಕೆ ನೋಂದಣಿಯಾಗಲು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಗೂಗಲ್ ಫಾರ್ಮ್ ಭರ್ತಿ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಆಫ್‌ಲೈನ್ ನೋಂದಣಿ ಮಾಡಿಕೊಳ್ಳುವವರು ಸ್ಥಳದಲ್ಲೇ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ದೂ. 0821-2564179 ಸಂಪರ್ಕಿಸಬಹುದು ಎಂದು ತಿಳಿಸಿದರು.
ರಾಜ್ಯಮಟ್ಟದ ಯುವಜನೋತ್ಸವವನ್ನು ಮೈಸೂರಿನಲ್ಲಿ ಆಯೋಜಿಸಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ನೆಹರು ಯುವ ಕೇಂದ್ರದ ಅಧಿಕಾರಿ ಅಭಿಷೇಕ ಚವರೆ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಎಂ.ಬಿ.ಸುರೇಶ್ ಇದ್ದರು.