ಜಿಲ್ಲೆ

4ರಂದು 390 ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ವಿತರಣೆ; ಇನ್ನುಳಿದ ಅರ್ಹರಿಗೆ ಶೀಘ್ರ ಹಸ್ತಾಂತರ: ಹರತಾಳು ಹಾಲಪ್ಪ

ಸಾಗರ: ಕಂದಾಯ ಇಲಾಖೆಯಿಂದ ಗಣಪತಿ ಕೆರೆ ದಂಡೆಯ ಸಮೀಪವಿರುವ ಶಾಶ್ವತ ಧ್ವಜಸ್ತಂಭದ ಪಕ್ಕದ ಆವರಣದಲ್ಲಿ ಫೆ.4ರಂದು ಮಧ್ಯಾಹ್ನ 3ಕ್ಕೆ 390 ರೈತರಿಗೆ ಬಗರ್‌ಹುಕುಂ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಾಗರ ತಾಲೂಕಿನಲ್ಲಿ ಬಗರ್‌ಹುಕುಂ ಅಡಿ ಸಾವಿರಾರು ಅರ್ಜಿಗಳು ಬಂದಿದ್ದರೂ ಅವುಗಳ ಪೈಕಿ ಮೊದಲ ಹಂತದಲ್ಲಿ 390 ರೈತರಿಗೆ ಹಕ್ಕುಪತ್ರ ನೀಡಲಾಗುತ್ತದೆ. ಇನ್ನು ಒಂದಷ್ಟು ಹಕ್ಕುಪತ್ರವನ್ನು ಸದ್ಯದಲ್ಲಿಯೆ ವಿತರಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.4 ಮತ್ತು 5ರಂದು ಕೆರೆಹಬ್ಬವನ್ನು ಅರ್ಥಪೂರ್ಣವಾಗಿ ನಡೆಸುವ ಸಂಬಂಧ ಅಗತ್ಯ ಸಿದ್ಧತೆ ನಡೆಸಲಾಗಿದೆ. ಪರಿಸರ ಉಳಿಸುವ ಜತೆಗೆ ಜಲದ ಬಗ್ಗೆ ಗೌರವಾಧಾರ ಮೂಡಿಸುವ ಸಾಗರಾರತಿ ಕಾರ್ಯಕ್ರಮ ಫೆ.4ರಂದು ಸಂಜೆ 6ಕ್ಕೆ ಗಣಪತಿ ಕೆರೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸಚಿವ ಸುನೀಲ್ ಕುಮಾರ್, ಕೆ.ಎಸ್.ಗುರುಮೂರ್ತಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಇಂದಿರಾಗಾಂಧಿ ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಲಿದ್ದು ಪ್ರಥಮ ದರ್ಜೆ ಕಾಲೇಜಿನ ತಂಡದಿಂದ ಕಂಸಾಳೆ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಫೆ.4ರಂದು ಬೆಳಗ್ಗೆ 6.30ಕ್ಕೆ ಗಣಪತಿ ಕೆರೆ ಸ್ವಚ್ಛಗೊಳಿಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪುರುಷರು, ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಚಿತ್ರನಟ ವಿಜಯ ರಾಘವೇಂದ್ರ ಚಾಲನೆ ನೀಡಲಿದ್ದಾರೆ. ನಂತರ ಆಹಾರ ಮೇಳ ಉದ್ಘಾಟನೆಗೊಳ್ಳಲಿದೆ. ಸಂಜೆ 6.30ರಿಂದ ಖ್ಯಾತ ಗಾಯಕ ಹೇಮಂತ್ ಮತ್ತು ತಂಡದಿಂದ ಸಂಗೀತ ರಸಸಂಜೆ ಏರ್ಪಡಿಸಲಾಗಿದೆ ಎಂದರು.

9190 ಎಕರೆ ಕಡತ ದೆಹಲಿಗೆ:

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಸಲಾಗಿದೆ. ರೈತರ ಸ್ವಾಧೀನದಲ್ಲಿರುವ 9,190 ಎಕರೆ ಜಮೀನಿಗೆ ಸಂಬಂಧಪಟ್ಟ ಕಡತವನ್ನು ತಕ್ಷಣ ದೆಹಲಿಗೆ ಕಳಿಸಿ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಎಲ್ಲ ವಿಚಾರಗಳನ್ನು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಹಾಲಪ್ಪ ಹೇಳಿದರು.