ಜಿಲ್ಲೆ

4ಜಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಕಾರ್ಯಾರಂಭ

ಶಿವಮೊಗ್ಗ: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ವದೇಶಿ 4ಜಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಾರ್ಯಾರಂಭಗೊಂಡಿರುವುದು ಟೆಲಿಕಾಂ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಭಾರತದ ನಡೆಯನ್ನು ಎತ್ತಿ ತೋರಿಸುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದ್ದಾರೆ.

ಟವರ್‌ಗಳು ಸೌರಶಕ್ತಿ ಚಾಲಿತವಾಗಿದ್ದು, ಅವುಗಳನ್ನು ಭಾರತದ ಅತಿದೊಡ್ಡ ಹಸಿರು ಟೆಲಿಕಾಂ ಸೈಟ್‌ಗಳ ಸಮೂಹವನ್ನಾಗಿ ಮಾಡಿದೆ. ಈ ಉಪಕ್ರಮವು ಡಿಜಿಟಲ್ ಭಾರತ್ ನಿಧಿ ಮೂಲಕ ಹಳ್ಳಿಗಳಲ್ಲಿ ಶೇ.100ರಷ್ಟು 4ಜಿ ಸ್ಯಾಚುರೇಶನ್ ಸಾಧಿಸುವ ಮಿಷನ್-ಮೋಡ್ ಪುಶ್‌ನ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತ ಏಕಕಾಲಕ್ಕೆ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿದ್ದು, ಅದರಲ್ಲಿ ಶಿವಮೊಗ್ಗ ಎಸ್‌ಡಿಸಿಎ(ಶಾರ್ಟ್ ಡಿಸ್ಟೆನ್ಸ್ ಚಾರ್ಜಿಂಗ್ ಏರಿಯಾ) ವ್ಯಾಪ್ತಿಗೊಳಪಡುವ ಸಾಗರದಲ್ಲಿ 26, ಬೈಂದೂರಿನಲ್ಲಿ 23, ಹೊಸನಗರದಲ್ಲಿ 14, ತೀರ್ಥಹಳ್ಳಿಯಲ್ಲಿ 16, ಶಿವಮೊಗ್ಗದಲ್ಲಿ 5, ಶಿಕಾರಿಪುರದಲ್ಲಿ 4, ಚನ್ನಗಿರಿಯಲ್ಲಿ 3, ಸೊರಬ, ಭದ್ರಾವತಿಯಲ್ಲಿ ತಲಾ ಒಂದೊಂದು 4ಜಿ ಸ್ಯಾಚುರೇಶನ್ ಇರುವ 90 ಟವರ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.