ಜಿಲ್ಲೆ

‘ಅಗ್ನಿವೀರ’ಗೆ 492 ಆಕಾಂಕ್ಷಿಗಳು ಭಾಗಿ

ಅವಿನಾಶ್ ಜೈನಹಳ್ಳಿ

ಭಾರತೀಯ ಸೇನೆಯ ‘ಅಗ್ನಿವೀರ’ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಮಂಗಳವಾರ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು, ಮೊದಲ ದಿನ 67 ಅಭ್ಯರ್ಥಿಗಳು ಗೈರುಹಾಜರಾದರು.
ಮೊದಲ ದಿನದ ದೈಹಿಕ ಪರೀಕ್ಷೆಯಲ್ಲಿ 559 ಅಭ್ಯರ್ಥಿಗಳ ಪೈಕಿ 492 ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಭಾಗವಹಿಸಿದ್ದರು.

ದೈಹಿಕ ಸಾಮರ್ಥ್ಯ ಪರೀಕ್ಷೆಯ ಜತೆಗೆ ವೈದ್ಯಕೀಯ ಪರೀಕ್ಷೆ, ಅಭ್ಯರ್ಥಿಗಳ ದಾಖಲೆ ಪರಿಶೀಲನೆಯೂ ನಡೆಯಿತು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಧ್ವಜಾರೋಹಣ ನೆರವೇರಿಸುವ ಮೂಲಕ ನಾಲ್ಕು ದಿನಗಳ ಸೇನಾ ನೇಮಕಾತಿ ರ‌್ಯಾಲಿಗೆ ಚಾಲನೆ ನೀಡಿದರು. ಭಾರತೀಯ ಸೇನೆ ಬೆಂಗಳೂರು ವಿಭಾಗದ ನೇಮಕಾತಿ ಅಧಿಕಾರಿ ಗೌರವ್ ತಪ್ಪಾ, ನೋಡಲ್ ಅಧಿಕಾರಿ ಮೇಜರ್ ಡಾ.ಜೆ.ಆರ್.ಬಾಲಸುಬ್ರಹ್ಮಣ್ಯಂ ಇತರರು ಇದ್ದರು.

ಆ.4ರವರೆಗೆ 1,723 ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಬೇಕಿದೆ. ಮೊದಲ ದಿನ 559 ಅಭ್ಯರ್ಥಿಗಳಿಗೆ ಪರೀಕ್ಷೆ ನಿಗದಿ ಮಾಡಲಾಗಿತ್ತು. ಉಳಿದ 1,124 ಅಭ್ಯರ್ಥಿಗಳಿಗೆ ಮುಂದಿನ ಮೂರು ದಿನಗಳವರೆಗೆ ದೈಹಿಕ ಪರೀಕ್ಷೆ ನಡೆಯಲಿದೆ.