ಜಿಲ್ಲೆ

49 ಕೋಟಿ ರೂ. ಅನುದಾನ ಮಂಜೂರಿಗೆ ಒತ್ತಾಯ

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ನಾಲಾ ಅಭಿವೃದ್ಧಿಗೆ 49 ಕೋಟಿ ರೂ. ಅನುದಾನ ಮಂಜೂರು ಮಾಡಿಸುವಂತೆ ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು, ನ.28ರಂದು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಆಯೋಜಿಸಿರುವ ಕಾವೇರಿ ನೀರಾವರಿ ನಿಗಮದ ಸಭೆಯಲ್ಲಿ ಅನುದಾನ ಮಂಜೂರು ಮಾಡಿಸುವಂತೆ ಒತ್ತಡ ಹೇರಬೇಕು. ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗ ವ್ಯಾಪ್ತಿಯ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟೆಮಳಲವಾಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು, ಕಟ್ಟೆಮಳಲವಾಡಿ ಅಣೆಕಟ್ಟು ವ್ಯಾಪ್ತಿಗೆ ಸೇರಿದ 1500 ಎಕರೆ ಪ್ರದೇಶ 16 ಕಿಮೀ ಹೆಚ್ಚು ನಾಲೆಯಿಂದ ನೀರು ಹರಿದು ಮುಂದೆ ಸಾಗಿ ಒಡಕೆಕಟ್ಟೆ ಹಾಗೂ ಅಕ್ಕಪಕ್ಕದ ಕೆರೆಗಳಿಗೆ ನೀರು ಹರಿದು ಹೋಗುತ್ತದೆ. ಈ ಬಾರಿ ಉತ್ತಮ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಕಿರಿಸೊಡ್ಲು, ರಾಮಪಟ್ಟಣ, ಅಗ್ರಹಾರ, ಸೋಮನಹಳ್ಳಿ, ತೊಂಡಾಳು, ಉಂಡವಾಡಿ, ಹುಲ್ಯಾಳು, ಗಾವಡಗೆರೆ, ಬಿಳಿಗೆರೆ, ಮಾರಗೌಡನಹಳ್ಳಿ, ಕಟ್ಟೆಮಳಲವಾಡಿ ಮತ್ತು ಕಟ್ಟೆಮಳಲವಾಡಿ ಕೊಪ್ಪಲು, ಉಯಿಗೌಡನಹಳ್ಳಿ ಗ್ರಾಮಗಳ ಜಮೀನುಗಳಿಗೆ ಈ ನಾಲೆಗಳಿಂದ ನೀರು ಹರಿದು ಬರುತ್ತಿದೆ.

ಈ ನಡುವೆ ಕಟ್ಟೆಮಳಲವಾಡಿ ನಾಲೆಯಲ್ಲಿ ಸಂಪೂರ್ಣವಾಗಿ ಹೂಳು ಮತ್ತು ಗಿಡ ಗಂಟಿಗಳು ಬೆಳೆದಿದ್ದು ಅಂತಿಮ ಭಾಗದ ಜಮೀನುಗಳಿಗೆ ನೀರು ಸಿಗದೆ ಬೆಳೆ ಬೆಳೆಯದಂತಾಗಿದ್ದಾರೆ. ಈ ಕುರಿತು ಹಲವು ಬಾರಿ ಫೌಂಡೇಷನ್ ವತಿಯಿಂದ ಹೋರಾಟ ಮಾಡಲಾಗಿದೆ. ಇದೀಗ ನ.28ರಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾವೇರಿ ನೀರಾವರಿ ನಿಗಮದ ಸಭೆಯನ್ನು ಆಯೋಜಿಸಲಾಗಿದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 49 ಕೋಟಿ ರೂ.ಗಳ ಅಂದಾಜು ಪಟ್ಟಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳ ತವರು ಜಿಲ್ಲೆ ವ್ಯಾಪ್ತಿಯ ಹುಣಸೂರು ತಾಲೂಕಿನ ರೈತರ ಬವಣೆ ಅರಿತು ಮಂಜೂರಾತಿ ನೀಡಬೇಕೆಂದು ಅವರು ಒತ್ತಾಯಿಸಿದರು.

ಚಿಲ್ಕುಂದ ನಾಗರಾಜು, ಪುರುಷೋತ್ತಮ ರಾವ್ ಸಾಳುಂಕೆ ಇತರರು ಇದ್ದರು.