ಜಿಲ್ಲೆ

ಕರೊನಾ ಆತಂಕದ ನಡುವೆಯೂ ಸ್ವಾಗತ ; ಮೊದಲ ದಿನ 48129 ವಿದ್ಯಾರ್ಥಿಗಳ ಹಾಜರಿ ; ಪಾಲಕರ ಒಪ್ಪಿಗೆ ಪತ್ರ ಕಡ್ಡಾಯ

ತುಮಕೂರು : ಕರೊನಾ ಆತಂಕದ ನಡುವೆಯೂ ಜಿಲ್ಲೆಯಲ್ಲಿ ಶಾಲೆ, ಕಾಲೇಜು ಪುನರಾರಂಭವಾಗಿದ್ದು, ಎಲ್ಲೆಡೆಯೂ ಮಕ್ಕಳು ಧೈರ್ಯದಿಂದಲೇ ಆಗಮಿಸಿದರು. ರೂಪಾಂತರಿ ಕರೊನಾ ಹಾಗೂ ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.

ಗುರುವಾರವೇ ಎಲ್ಲ ಶಾಲೆಗಳಲ್ಲಿಯೂ ಸ್ಯಾನಿಟೈಸ್ ಮಾಡಲಾಗಿತ್ತು, ತಳಿರು, ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ಎಲ್ಲ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು. ಸತತ 10 ತಿಂಗಳ ನಂತರ ಕರೊನಾ ಆತಂಕದ ನಡುವೆಯೂ ಮಕ್ಕಳು ಶಾಲೆಗೆ ಹಾಜರಾದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸಿದ್ಧಗಂಗಾ ಮಠದ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಬಿ.ಎ.ಗುಡಿಪಾಳ್ಯ, ಹನುಮಂತಪುರ ಪ್ರೌಢಶಾಲೆ ಹಾಗೂ ಎತ್ತೇನಹಳ್ಳಿ, ಕೈದಾಳ ಶಾಲೆಗೆ ಡಿಡಿಪಿಐ ಸಿ.ನಂಜಯ್ಯ ಜತೆ ಜಿಪಂ ಸಿಇಒ ಶುಭಾಕಲ್ಯಾಣ್ ಭೇಟಿ ನೀಡಿ ಶಾಲೆಯಲ್ಲಿ ಮಾರ್ಗಸೂಚಿ ಪಾಲನೆಯ ಬಗ್ಗೆ ಪರಿಶೀಲಿಸಿ ಸೂಚನೆಗಳನ್ನು ನೀಡಿದರು. ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಎರಡನೇ ಹಂತದ ವಿದ್ಯಾಗಮ ಕಾರ್ಯಕ್ರಮಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿ ಮಾತನಾಡಿದರು. ಡಾ.ಶಿವಕುಮಾರಸ್ವಾಮೀಜಿ, ಡಾ.ರಾಜಾರಾಮಣ್ಣ ಅವರಂತಹ ಮಹಾ ಮೇಧಾವಿಗಳು ಓದಿದ ಶಾಲೆಯಾಗಿದ್ದು ದತ್ತು ಪಡೆದು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಶಾಲೆ ಮತ್ತು ಕಾಲೇಜಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ಇನ್ನಿತರ ಅನುದಾನ ಬಳಸಿಕೊಂಡು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ಬ್ರಿಟಿಷ್ ಶಿಕ್ಷಣ ನೀತಿಯಿಂದಾಗಿ ಬಾಯಿ ಪಾಠಮಾಡಿ, ಒಪ್ಪಿಸಿ, ಅಂಕಗಳಿಸುವ ಶಿಕ್ಷಣಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಹೊಸ ಶಿಕ್ಷಣ ನೀತಿಯಲ್ಲಿ ಮಗುವಿನ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳನ್ನು ಒಳಗೊಂಡಿದೆ. ಹೊಸ ಶಿಕ್ಷಣ ನೀತಿ ಯಶಸ್ವಿಯಾಗಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಪಾಲಿಕೆ ಸದಸ್ಯೆ ಗಿರಿಜಾ, ಸಾಹಿತಿ ಕವಿತಾಕೃಷ್ಣ, ಉಪಪ್ರಾಚಾರ್ಯೆ ನೂರ್‌ಫಾತೀಮಾ, ಶಿಕ್ಷಕರಾದ ಬಸವರಾಜು, ವಾಣಿ, ಕೃಷ್ಣಮೂರ್ತಿ, ಪುಷ್ಪಾ, ತಬ್ಸಮ್, ಅನ್ನಪೂರ್ಣ, ಅಂಬಿಕಾ, ಸೈಯದ್ ಪೀರ್ ದೋಸ್, ಉಮಾಶಂಕರ್ ಇದ್ದರು.

ಕರೊನಾ ಹಿನ್ನೆಲೆಯಲ್ಲಿ 10 ತಿಂಗಳಿನಿಂದ ಮುಚ್ಚಿದ್ದ ಶಾಲೆಗಳು ಇದೀಗ ಸರ್ಕಾರದ ಮಾರ್ಗಸೂಚಿಗಳನ್ವಯ ಪುನರಾರಂಭಗೊಂಡಿದ್ದು, 6 ರಿಂದ 9ನೇ ತರಗತಿಗೆ ವಿದ್ಯಾಗಮ ಕಾರ್ಯಕ್ರಮಕ್ಕೆ ಸೂಚಿಸಲಾಗಿದೆ. ಶಾಲೆಗಳಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ, ಶೌಚಗೃಹಗಳ ಸ್ವಚ್ಛತೆ, ಪರಸ್ಪರ ಅಂತರ ಕಾಪಾಡಲಾಗುತ್ತಿದೆ. ಬಹಳ ಎಚ್ಚರಿಕೆಯಿಂದ ಶಾಲೆ ಆರಂಭಿಸಲಾಗಿದೆ. ಶುಭಾಕಲ್ಯಾಣ್ ಜಿಪಂ ಸಿಇಒ