ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 202 ಕರೊನಾ ಪಾಸಿಟಿವ್ ಹೊಸ ಪ್ರಕರಣಗಳು ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ವಿವಿಧ ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 64 ಮಂದಿ ಇಂದು ಬಿಡುಗಡೆಯಾಗಿದ್ದಾರೆ.
ಹೊಸ ಸೋಂಕಿತರಲ್ಲಿ ಮಂಗಳೂರು 139, ಬಂಟ್ವಾಳ 35, ಪುತ್ತೂರು 11, ಸುಳ್ಯ 3 ಮತ್ತು ಬೆಳ್ತಂಗಡಿಯಲ್ಲಿ 4 ಮಂದಿ ಸೇರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳು 9914 ದಾಖಲಾಗಿದ್ದು, 7193 ಮಂದಿ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. 2420 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 278 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 9,661ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಹೋಂ ಮತ್ತು ಆಸ್ಪತ್ರೆ ಐಸೋಲೇಶನ್‌ನಿಂದ 365 ಮಂದಿ ಗುಣವಾಗಿದ್ದಾರೆ. ಈವರೆಗೆ 6857 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಶುಕ್ರವಾರ 1516 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 1017 ಮಂದಿಯ ವರದಿ ಬರಲು ಬಾಕಿ ಇದೆ. 2729 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯಲ್ಲಿ 105 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಕೋವಿಡ್ ಸೋಂಕಿನಿಂದ ಮುಕ್ತರಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ 140 ಮಂದಿ ಕರೊನಾದಿಂದ ಗುಣವಾಗಿದ್ದಾರೆ. ಮಂಗಳೂರಿನಲ್ಲಿ ಪ್ಲಾಸ್ಮಾ ಸಂಗ್ರಹ ಆರಂಭ ವಾದಾಗ ಆಸಕ್ತ ಪೊಲೀಸರು ಪ್ಲಾಸ್ಮಾ ದಾನ ಮಾಡಲಿದ್ದಾರೆ.
-ವಿಕಾಸ್ ಕುಮಾರ್, ಪೊಲೀಸ್ ಆಯುಕ್ತ, ಮಂಗಳೂರು