ಬಸವಕಲ್ಯಾಣ: ಬಿಜೆಪಿ ರೈತ ಮೋರ್ಚಾದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿ, ಬರ ಘೋಷಣೆಗೆ ಒತ್ತಾಯಿಸಲಾಯಿತು. ನಗರದ ಬಸವೇಶ್ವರ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ತಹಸೀಲ್ದಾರ್ ಶಾಂತಗೌಡಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಾಸಕ ಶರಣು ಸಲಗರ ಮಾತನಾಡಿ, ಬಸವಕಲ್ಯಾಣ, ಹುಸೂರು ತಾಲೂಕು ಸೇರಿ ಉತ್ತರ ಕರ್ನಾಟಕದ ಎಲ್ಲ ತಾಲೂಕು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದಲ್ಲಿ ಮಳೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಬರ ಘೋಷಣೆಗೆ ಸರ್ಕಾರ ಮುಂದಾಗಿದ್ದು, ಇಲ್ಲಿ ನೀರಾವರಿ ಸೌಲಭ್ಯವಿದೆ. ಸಮಸ್ಯೆ ಇಲ್ಲದ ಕಡೆ ಆದ್ಯತೆ ನೀಡಿ ಸಮಸ್ಯೆ ಇರುವ ಕಡೆ ಬರ ಘೋಷಿಸುತ್ತಿಲ್ಲ. ಸುಳ್ಳು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಮುಖಂಡರಾದ ಸೂರ್ಯಕಾಂತ ಚಿಲ್ಲಾಬಟ್ಟೆ, ಮಧವರಾವ ಹಾಸೂರೆ, ಶಂಕರ ನಾಗದೆ, ಕಮಲಾಕರ್ ಪಾಟೀಲ್, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ಯೆ, ಬಾಬುರಾವ ಹಿಂಸೆ ಮಾತನಾಡಿದರು.
ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶಿವರುದ್ರಪ್ಪ ತಾಟೆ, ಪ್ರಮುಖರಾದ ಸಂಜುಕುಮಾರ ಸುಗರೆ, ಶೋಭಾ ತೆಲಂಗ, ಉಲ್ಕಾವತಿ ಬಿರಾದಾರ, ವಿಜಯಕುಮಾರ ವಕಾರೆ, ಜ್ಞಾನೇಶ್ವರ ಪಾಟೀಲ್, ಸಾಗರ ಸೂಗುರೆ, ಅಮರ ಬಡದಾಳೆ, ಸಿದ್ದು ಬಿರಾದಾರ, ಅಶೋಕ ತೇಲಂಗ, ಪ್ರದೀಪ ಗಡವಂತೆ, ಮಹಾಂತಯ್ಯ ಸ್ವಾಮಿ, ಶ್ರೀನಿವಾಸ ಸದಾನಂದೆ, ರಾಮಚಂದ್ರ ಹುಡಗೆ, ಇಂದ್ರಸೇನ ಬಿರಾದಾರ, ನಂದು ಕುಲ್ಕರ್ಣಿ, ವಿಕಾಸ ಪಾಟೀಲ್, ರಾಜು ರಾಜೋಳೆ ಇತರರಿದ್ದರು.