ಕಾಸರಗೋಡು: ಕೇರಳಾದ್ಯಂತ ಜನತೆ ಅತಿಯಾದ ತಾಪಮಾನದ ಜತೆಗೆ ಮಳೆ ಕೊರತೆ ಎದುರಿಸುತ್ತಿದ್ದು, ಭವಿಷ್ಯದಲ್ಲಿ ಬರಗಾಲದ ಆತಂಕ ಎದುರಾಗಿದೆ. ಈ ಮೂಲಕ ಕೇರಳ ಕಳೆದ 55 ವರ್ಷಗಳ ಅವಧಿಯಲ್ಲಿ ಆರನೇ ಬಾರಿ ಅನಾವೃಷ್ಟಿ ಎದುರಿಸಬೇಕಾದ ಸಾಧ್ಯತೆ ಕಂಡುಬರುತ್ತಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಶೇ.48ರಷ್ಟು ಮಳೆ ಕೊರತೆ ಉಂಟಾಗಿದ್ದು, ಜತೆಗೆ ಭಾರಿ ತಾಪಮಾನ ಏರಿಕೆಯಾಗಿರುವುದು ಅನಾವೃಷ್ಟಿಯ ಎಲ್ಲ ಸೂಚನೆ ನೀಡುತ್ತಿದೆ. ಕೇರಳದ ಕೊಟ್ಟಾಯಂ, ತೃಶ್ಯೂರ್, ಮಲಪ್ಪುರಂ, ಪಾಲಕ್ಕಾಡ್, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಅತಿ ಕಠಿಣ, ಇಡುಕ್ಕಿ, ಎರ್ನಾಕುಳಂ, ಆಲಪ್ಪುಯ, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಕಠಿಣ, ತಿರುವನಂತಪುರ, ಕೊಲ್ಲಂ ಜಿಲ್ಲೆಗಳಲ್ಲಿ ಸಾಮಾನ್ಯ ಅನಾವೃಷ್ಟಿ ಎದುರಾಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದ್ದು, ಬರ ಭೀತಿಯಿಂದ ಪಾರಾಗಿದೆ.
ಈ ಬಾರಿ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮುಂದಿನ ದಿನದಲ್ಲಿ ಮಳೆಯಾಗುವ ಸಾಧ್ಯತೆ ಕ್ಷೀಣಿಸಿರುವುದರಿಂದ ಈ ಜಿಲ್ಲೆಗಳಲ್ಲಿ ಅನಾವೃಷ್ಟಿ ಮುಂದುವರಿಯುವ ಸಾಧ್ಯತೆ ಬಗ್ಗೆ ರಾಜ್ಯ ಜಲಸಂಪನ್ಮೂಲ ಇಲಾಖೆ ಮುನ್ಸೂಚನೆ ನೀಡಿದೆ. ಹಸಿರು ವಲಯವಾಗಿರುವ ಇಡುಕ್ಕಿ, ವಯನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಈ ಪ್ರದೇಶದಲ್ಲಿ ತೇವಾಂಶ ಗಣನೀಯ ಕುಸಿಯಲಾರಂಭಿಸಿದೆ.
ಮಳೆ ಸುರಿಯುವವರೆಗೆ ನೀರಿನ ಮಿತ ಬಳಕೆ ಮಾಡುವುದು, ರಾಜ್ಯದ ಎಲ್ಲ ಜಲಾಶಯ, ನೀರಿನ ಮೂಲ ಸಂರಕ್ಷಣೆಗೆ ಕ್ರಮ, ಕೆರೆಗಳಲ್ಲಿ ನೀರು ಬತ್ತದಿರುವಂತೆ ಭೂಗರ್ಭ ಜಲಸಂರಕ್ಷಣೆ ನಡೆಸುವುದು, ನೀರಿನಲ್ಲಿ ಮಾಲಿನ್ಯ ಸೇರ್ಪಡೆಗೊಳ್ಳದಂತೆ ತಡೆಯುವುದು, ಕೃಷಿಗೆ ಹನಿ ನೀರಾವರಿ ಯೋಜನೆ ಅಳವಡಿಸುವುದು, ಮಳೆನೀರು ಸಂಗ್ರಹಗಾರ ಸಂರಕ್ಷಿಸುವುದು ಮೊದಲಾದ ಕ್ರಮ ಕೈಗೊಳ್ಳುವಂತೆ ತಜ್ಞರು ಸೂಚಿಸಿದ್ದಾರೆ.
ಕಾಸರಗೋಡಲ್ಲೂ ಬರದ ಛಾಯೆ: ಕಾಸರಗೋಡು ಬರ ಎದುರಿಸುವ ಪಟ್ಟಿಗೆ ಸೇರ್ಪಡೆಗೊಂಡಿದ್ದು ಜಿಲ್ಲೆಯಲ್ಲಿ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕೃಷಿ ಕ್ಷೇತ್ರಗಳಲ್ಲೂ ಬರದ ಛಾಯೆ ಆವರಿಸಿದೆ. ಇದರೊಂದಿಗೆ ಗಡಿ ಗ್ರಾಮಗಳ ರೈತರು ಕಂಗಾಲಾಗಿದ್ದಾರೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಆಗಸ್ಟ್‌ನಲ್ಲಿ ಕಳೆದ 100 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.30ರಿಂದ 33ರಷ್ಟು ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಮಳೆ ಕಡಿಮೆಯಾಗಲು ಎಲ್‌ನಿನೋ ವಿದ್ಯಮಾನವೇ ಕಾರಣ ಎಂದು ಅಂದಾಜಿಸಲಾಗಿದೆ. ಕೇರಳದಲ್ಲಿ ಮಾನ್ಸೂನ್ ಸಮಯ ಸೆಪ್ಟೆಂಬರ್ ಮೂರನೇ ವಾರದವರೆಗೆ ಮಾತ್ರ. ಈ ಮೂರು ವಾರದಲ್ಲಿ ಸಾಕಷ್ಟು ಮಳೆಯಾದರೆ ಈಗಿನ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಈ ತಿಂಗಳು ಶೇ.94ರಿಂದ 96ರಷ್ಟು ಮಳೆಯಾಗುವ ನಿರೀಕ್ಷೆ ಇದೆ.