ಹುಬ್ಬಳ್ಳಿ : ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ’
ಜ್ಞಾನದಷ್ಟು ಪವಿತ್ರವಾದುದು ಯಾವುದೂ ಇಲ್ಲ. ಜ್ಞಾನ ಪ್ರಸಾರದಂತಹ ಪವಿತ್ರಕಾರ್ಯದಲ್ಲಿ ತೊಡಗಿದವರೆಲ್ಲ ಪೂಜಾರ್ಹರು. ಇಂಥವರಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಗ್ರಗಣ್ಯರು.
1970 ರಲ್ಲಿ ಧಾರವಾಡದ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. 1973ರ ಅ. 18ರಂದು ಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯಾಧ್ಯಕ್ಷತೆಯಲ್ಲಿ ಉದಯಿಸಿದ ನೂತನ ಆಡಳಿತ ಮಂಡಳಿ, ಜೆಎಸ್ಎಸ್ ಅನ್ನು ಸುಪರ್ದಿಗೆ ತೆಗೆದುಕೊಂಡಿತು.
ಅಂದು 6-7 ಸಂಸ್ಥೆಯಿಂದ 320 ವಿದ್ಯಾರ್ಥಿಗಳಿದ್ದರು. ಡಾ. ಹೆಗ್ಗಡೆಯವರು ಜವಾಬ್ದಾರಿ ವಹಿಸಿಕೊಂಡ ನಂತರ ಜೆಎಸ್ಎಸ್ ನೂತನ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕಿತು. ಇಲ್ಲಿ ಎಲ್ಕೆಜಿಯಿಂದ ಪಿಜಿಯವರೆಗೆ ಹಾಗೂ ಪಿಎಚ್.ಡಿ ವಿದ್ಯಾಭ್ಯಾಸದವರೆಗೆ ಅವಕಾಶವಿದೆ.
ಧಾರವಾಡದ ವಿದ್ಯಾಗಿರಿ ಕ್ಯಾಂಪಸ್ ಹಾಗೂ ಹುಬ್ಬಳ್ಳಿಯ ಒಟ್ಟು 4 ಕ್ಯಾಂಪಸ್ನ 22 ವಿದ್ಯಾ ಸಂಸ್ಥೆಗಳಲ್ಲಿ 20,500 ವಿದ್ಯಾರ್ಥಿಗಳು ಓದುತ್ತಿದ್ದಾರೆ. 1,200 ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಿಕ್ಷಣ, ಸಿಬಿಎಸ್ಇ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಡಿಪ್ಲೊಮಾ, ಐಟಿಐ, ಪದವಿ, ಬಿಎಡ್, ಎಂಬಿಎ ಕಾಲೇಜುಗಳು, ಕಾನೂನು ಮಹಾವಿದ್ಯಾಲಯ, ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರ, ಆರ್ಥಿಕ ಸಂಶೋಧನಾ ಕೇಂದ್ರ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿವೆ.
47 ವರ್ಷಗಳಲ್ಲಿ ಶೈಕ್ಷಣಿಕವಾಗಿ ಜೆಎಸ್ಎಸ್ ಬೃಹದಾಕಾರದಲ್ಲಿ ಬೆಳೆದಿದ್ದು, ಉತ್ತರ ಕರ್ನಾಟಕದ ಸಾಮಾಜಿಕ-ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದೆ. ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರ ಆಶೀರ್ವಾದ, ಡಾ. ನ. ವಜ್ರಕುಮಾರರ ಕರ್ಣಧಾರತ್ವ, ಡಾ. ಅಜಿತ ಪ್ರಸಾದರವರ ದೂರದೃಷ್ಟಿ ಫಲವಾಗಿ ಜೆಎಸ್ಎಸ್ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಶಿಕ್ಷಣ ಸಂಸ್ಥೆ ಕಟ್ಟುವುದೆಂದರೆ ದೇವಸ್ಥಾನಗಳನ್ನು ನಿರ್ವಿುಸಿದ್ದಷ್ಟೆ ಸಂತೋಷವಾಗುತ್ತದೆ ಎನ್ನುತ್ತಾರೆ ಡಾ. ಹೆಗ್ಗಡೆಯಯವರು. ಡಾ. ಹೆಗ್ಗಡೆಯವರ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ, ನಾನು ನಿಮಿತ್ತ ಮಾತ್ರ ಎನ್ನುವ ಡಾ. ನ. ವಜ್ರಕುಮಾರ ಅವರ ವಿನಯವೇ ಈ ಶಿಕ್ಷಣ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ ಎಂದರೆ ಅತಿಶೋಕ್ತಿಯಾಗದು.