ಜಿಲ್ಲೆ

ಸ್ಥಳೀಯ ಭಾಷೆ, ಸಂಸ್ಕೃತಿ ಬೆಳೆಸಿದ ವಿವಿ : ಪ್ರೊ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಂಗಳೂರು ವಿವಿ ಪ್ರಸ್ತುತ ದಿನಗಳಲ್ಲಿ ಸ್ವಲ್ಪ ಆತಂಕದ ಸ್ಥಿತಿ ಎದುರಿಸಿದರೂ ಒಂದು ಕಾಲದಲ್ಲಿ ಕರಾವಳಿ ಭಾಗದ ಜನರ ಉನ್ನತ ಶಿಕ್ಷಣದ ಕನಸು ನನಸಾಗಿಸಿ ಸುವರ್ಣ ಯುಗ ಕಂಡಿತ್ತು. ಉನ್ನತ ಶಿಕ್ಷಣದ ಹಲವು ಕನಸುಗಳೊಂದಿಗೆ ನೂರಾರು ಮನಸ್ಸುಗಳ ಒಗ್ಗೂಡುವಿಕೆಯಲ್ಲಿ ಕೊಣಾಜೆಯಲ್ಲಿ ಆರಂಭಗೊಂಡ ಮಂಗಳೂರು ವಿವಿ ಸಾಗಿ ಬಂದ ಹಾದಿ, ಹೆಜ್ಜೆಗುರುತಿನ ಕುರಿತು ಆತ್ಮಾವಲೋಕನ ಮಾಡಬೇಕಿದೆ ಎಂದು ಹಾವೇರಿ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ 46ನೇ ಸಂಸ್ಥಾಪನಾ ಹಾಗೂ ಶಿಕ್ಷಕರ ದಿನ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ವಿವಿ ಸ್ಥಾಪನೆ ಸಂದರ್ಭದ ಆಶಯದಂತೆ ಶಿಕ್ಷಣದೊಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿ ಬೆಳೆಸುವ ಕಾರ್ಯ ಮಾಡಿದೆ. ವಿವಿಗಳ ಕೆಲಸ, ಸಂಶೋಧನೆಗಳಿಂದ ಗುರುತಿಸಬೇಕೇ ಹೊರತು ಸವಲತ್ತುಗಳಿಂದಲ್ಲ ಎಂದರು.

ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಉಪಸ್ಥಿತರಿದ್ದರು. ಕುಲಸಚಿವ ರಾಜು ಮೊಗವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಗಣೇಶ್ ಸಂಜೀವ ವಂದಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

ನೂತನ ತಂತ್ರಾಂಶ ಲೋಕಾರ್ಪಣೆ

ಪರೀಕ್ಷಾಂಗ ವಿಭಾಗ ವತಿಯಿಂದ ಆನ್‌ಲೈನ್ ಸರ್ಟಿಫಿಕೆಟ್ ಮ್ಯಾನೆಜ್ಮೆಂಟ್ ಸಿಸ್ಟಂ ಹಾಗೂ ಆನ್‌ಲೈನ್ ಪಿಎಚ್.ಡಿ ಟ್ರ್ಯಾಕಿಂಗ್ ಸಿಸ್ಟಂ ಲೋಕಾರ್ಪಣೆಗೊಳಿಸಲಾಯಿತು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 1,191 ಸಂಶೋಧನಾ ಪ್ರಬಂಧಗಳು ಹಾಗೂ 15 ಪೇಟೆಂಟ್‌ಗಳಿವೆ. 24 ವಿವಿಧ ಪೀಠಗಳು ಕಾರ್ಯಾಚರಿಸುತ್ತಿವೆ. 154 ಕಾಲೇಜುಗಳು ಹಾಗೂ 42 ಸ್ನಾತಕೋತ್ತರ ವಿಭಾಗಗಳಿವೆ. ವಿವಿಯ ಆರ್ಥಿಕ ಸಮಸ್ಯೆ ಹೋಗಲಾಡಿಸಲು ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಸಿಬ್ಬಂದಿ ವೇತನವನ್ನು ನಿಗದಿತ ಸಮಯಕ್ಕೆ ಪಾವತಿಸಲಾಗುತ್ತಿದೆ. ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಪ್ರೊ.ಪಿ.ಎಲ್ ಧರ್ಮ, ಕುಲಪತಿ, ಮಂಗಳೂರು ವಿವಿ