ಜಿಲ್ಲೆ

ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ : ವಿ.ಎಸ್.ಬೇರಿಂಜ ಆಗ್ರಹ

ಬಂಟ್ವಾಳ: ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ 5 ವರ್ಷಕ್ಕೊಮ್ಮೆ ಪರಿಷ್ಕರಣೆಯಾಗಿ ಜಾರಿಗೆ ಬರಬೇಕಾದುದು ನಿಯಮ. ಆದರೆ 5 ವರ್ಷ ಕಳೆದರೂ ಮಾಲೀಕರು ಕನಿಷ್ಠ ವೇತನ ಜಾರಿಗೊಳಿಸುವ ಬಗ್ಗೆ ಕರೆದ ಪ್ರಮುಖ ಸಭೆಗಳಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಅಧ್ಯಕ್ಷ ವಿ.ಎಸ್.ಬೇರಿಂಜ ಅಭಿಪ್ರಾಯಪಟ್ಟರು.

ಬಿ.ಸಿ.ರೋಡಿನಲ್ಲಿ, ಪಾಣೆಮಂಗಳೂರು ಫಿರ್ಕಾ ಬೀಡಿ ಆಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ)ನ 46ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಐಟಿಯುಸಿ ಜಿಲ್ಲಾ ಮುಖಂಡ ವಿ.ಕುಕ್ಯಾನ್, ಬೀಡಿ ಆ್ಯಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಕೋಶಾಧಿಕಾರಿ ಎಂ.ಕರುಣಾಕರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಶಂಭೂರು ಮಾತನಾಡಿದರು. ಸಂಘದ ಅಧ್ಯಕ್ಷೆ ಉಮಾವತಿ ಕುರ್ನಾಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುರೇಶ್ ಕುಮಾರ್ ಲೆಕ್ಕಪತ್ರ ಮಂಡಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಉಮಾವತಿ ಕುರ್ನಾಡು, ಉಪಾಧ್ಯಕ್ಷರಾಗಿ ಸೀತಾ ಅನಂತಾಡಿ, ಭಾರತಿ ಪ್ರಶಾಂತ್, ಕುಸುಮ ಕಳ್ಳಿಗೆ, ರೇವತಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಸಹಕಾರ್ಯದರ್ಶಿಗಳಾಗಿ ಶಮಿತಾ, ಮಮತಾ, ಮೋಹಿನಿ ಬಿ.ಸಿ.ರೋಡು, ಯಶವಂತಿ ಚೇಳೂರು ಹಾಗೂ ಕೋಶಾಧಿಕಾರಿಯಾಗಿ ಬಿ.ಶೇಖರ್ ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.