ಎನ್.ಆರ್.ಪುರ: ರಾಜ್ಯದಲ್ಲಿ ಪ್ರತಿ ದಿನ 46 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆ ಇದ್ದು, ಮುಂದಿನ 10 ವರ್ಷಕ್ಕೆ ಬೇಕಾಗುವ ವಿದ್ಯುತ್ ಬಗ್ಗೆ ಸರ್ವೇ ನಡೆಯುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆಜಾರ್ಜ್ ಅವರು ವಿದ್ಯುತ್ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ಯಾವ ಮಾರ್ಗದಲ್ಲಿ ವಿದ್ಯುತ್ ಉತ್ಪಾದನೆ ಮಾಡಬೇಕು ಎಂಬುದರ ಕುರಿತು ಯೋಜನೆ ರೂಪಿಸುತ್ತಿದ್ದಾರೆ. ಮುಂದಿನ 1 ತಿಂಗಳಲ್ಲಿ ಪಾವಗಡದಲ್ಲಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಘಟಕಕ್ಕೆ ಟೆಂಡರ್ ಕರೆದಿದ್ದೇವೆ. ಪಾವಗಡದಲ್ಲಿ 13 ಸಾವಿರ ಎಕರೆಯಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುರ್ ಸ್ಥಾವರ ಇದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಪಾವಗಡದ ಸೋಲಾರ್ ವಿದ್ಯುತ್ ಘಟಕ ಪ್ರಪಂಚದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಘಟಕವಾಗಿತ್ತು. ಈಗ 4ನೇ ಸ್ಥಾನದಲ್ಲಿದೆ. ಮತ್ತೆ 1ನೇ ಸ್ಥಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಸಚಿವ ಕೆ.ಜೆ.ಜಾರ್ಜ್ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರಸ್ತುತ ಪಾವಗಡದಲ್ಲಿ 2 ಸಾವಿರ ಮೆಗಾವಾಟ್ ಸೋಲಾರ್ ಘಟಕಕ್ಕೆ, ಮಧುಗಿರಿಯಲ್ಲಿ 500 ಮೆಗಾವಾಟ್ ಘಟಕಕ್ಕೆ, ಕುಸುಮೆಸಿಯಲ್ಲಿ 3 ಸಾವಿರ ಮೆಗಾವಾಟ್, ಕಲುಬುರಗಿಯಲ್ಲಿ 100 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದರು.
ಡೆನ್ಮಾರ್ಕ್, ಸ್ಪೀಡನ್, ಜರ್ಮನಿ ದೇಶಕ್ಕೆ ಸೋಲಾರ್ ಹಾಗೂ ಇತರ ವಿದ್ಯುತ್ ಉತ್ಪಾದನೆ ಬಗ್ಗೆ ಅಧ್ಯಯನ ಮಾಡಲು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದ್ರಪ್ಪಯ್ಯ ಹಾಗೂ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಮಾಡಿದ್ದೆ. ಅಲ್ಲಿ ವಿದ್ಯುತ್‌ಗೆ ಸಂಬಂಧಪಟ್ಟ ಸಮ್ಮೇಳನ ನಡೆದಿತ್ತು. ಅದರ ಚರ್ಚೆಯಲ್ಲಿ ನಾನು ಭಾಗವಹಿಸಿದ್ದೆ. ಡೆನ್ಮಾರ್ಕ್‌ನಲ್ಲಿ ಅತಿ ದೊಡ್ಡ ಸೋಲಾರ್ ಸ್ಥಾವರ ವೀಕ್ಷಣೆ ಮಾಡಿದ್ದೇವೆ. ಕೃಷಿ ಚಟುವಟಿಕೆಯ ತ್ಯಾಜ್ಯ, ಇತರ ಕಸವನ್ನು ಪರಿವರ್ತಿಸಿ ವಿದ್ಯುತ್ ಉತ್ಪಾದಿಸುವ ವಿಧಾನ, ಗ್ರೀನ್ ಲ್ಯಾಬ್, ಇರಿಗೇಷನ್ ಸಿಸ್ಟಮ್‌ನಲ್ಲಿ ವಿದ್ಯುತ್ ಉತ್ಪಾದನೆ ಅಧ್ಯಯನ ಮಾಡಿದ್ದೇವೆ. ನಮ್ಮ ದೇಶದ ವಿದ್ಯುತ್ ಉತ್ಪಾದನೆ ಮಾಡುವ ವಿಧಾನವನ್ನು ವಿದೇಶದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಬಗ್ಗೆ ಡೆನಾರ್ಕ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಚರ್ಚೆಯಾಗಿದೆ ಎಂದರು.
ನಮ್ಮ ದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಹಾಕಿರುವ ವಿದ್ಯುತ್ ತಂತಿಯಿಂದಲೇ ವಿದ್ಯುತ್ ಹೋಗಬೇಕಾಗಿದೆ. ಆ ಲೈನಿನಲ್ಲಿ ಸೋಲಾರ್ ವಿದ್ಯುತ್ ಸಮರ್ಪಕವಾಗಿ ಹರಿಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಪರ್ಯಾಯವಾಗಿ ಯಾವ ರೀತಿಯಲ್ಲಿ ವಿದ್ಯುತ್ ಪರಿಕರಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಚರ್ಚೆ ನಡೆಸಲಾಗಿದೆ ಎಂದರು.