ಜಿಲ್ಲೆ

ಚಾಮುಂಡಿಬೆಟ್ಟ ಅಭಿವೃದ್ಧಿಗೆ 45.7 ಕೋಟಿ ರೂ.

ಮಂಜುನಾಥ ತಿಮ್ಮಯ್ಯ

ಮೈಸೂರು: ಕೇಂದ್ರ ಪುರಸ್ಕೃತ ‘ಪ್ರಸಾದ್’ ಮತ್ತು ಸ್ವದೇಶ್ ದರ್ಶನ್ ಯೋಜನೆಯಡಿ ನಗರದ ಪ್ರವಾಸಿ ತಾಣಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.


ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ನಗರದ ಚಾಮುಂಡಿಬೆಟ್ಟ ಅಭಿವೃದ್ಧಿ, ಸ್ವದೇಶ್ ದರ್ಶನ ಯೋಜನೆ ಅಡಿ ನಗರದ ದಸರಾ ವಸ್ತುಪ್ರದರ್ಶನ ಹಾಗೂ ಚಾಮರಾಜೇಂದ್ರ ಮೃಗಾಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.


ಭಾರತ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯ ಮತ್ತು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ನಗರದ ಚಾಮರಾಜೇಂದ್ರ ಮೃಗಾಲಯದ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಿತು.


ಸಂಸದ ಪ್ರತಾಪ್ ಸಿಂಹ ಮಾತನಾಡಿ, 45.70 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಮತ್ತು ಸ್ವದೇಶ್ ದರ್ಶನ ಯೋಜನೆ ಅಡಿ ಮೈಸೂರಿನ ಚಾಮುಂಡಿಬೆಟ್ಟ ಅಭಿವೃದ್ಧಿಗೆ 45.70 ಕೋಟಿ ರೂ., ದಸರಾ ವಸ್ತುಪ್ರದರ್ಶನ ಹಾಗೂ ಮೈಸೂರು ಮೃಗಾಲಯದ ಅಭಿವೃದ್ಧಿಗೆ 80 ಕೋಟಿ ರೂ. ಅನುದಾನವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ತಿಳಿಸಿದರು.


ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಬಸ್ ನಿಲ್ದಾಣ, ಆಟೋ ನಿಲ್ದಾಣಗಳಂತೆ ಟಾಂಗಾಗಳಿಗೆ ನಗರದಲ್ಲಿ 2ರಿಂದ 3 ಕಡೆ ಟಾಂಗಾ ನಿಲ್ದಾಣ ಸ್ಥಾಪಿಸಲಾಗುವುದು. ಮೈಸೂರನ್ನು ವೀಕ್ಷಿಸಲು ಬರುವ ಪ್ರವಾಸಿಗರು ಟಾಂಗಾ ಸವಾರಿಯನ್ನು ಬಯಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸವಾರಿಯ ಶುಲ್ಕವನ್ನು ನಿಗದಿಪಡಿಸಲಾಗುವುದು. ಯಾವುದೇ ಪ್ರಯಾಣಿಕರು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಟ್ರಾಫಿಕ್‌ಗೆ ತೊಂದರೆಯಾಗದಂತೆ ಸವಾರಿಯ ಮಾರ್ಗವನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.


ಇಕೋಲಾಜಿಕಲ್ ಎಕ್ಸೀರಿಯನ್ಸ್ ಅಡಿಯಲ್ಲಿ ಮೃಗಾಲಯ ಮತ್ತು ಕಾರಂಜಿ ಕೆರೆ, ಸಿದ್ಧಾರ್ಥನಗರದ ನ್ಯಾಷನಲ್ ಮ್ಯೂಸಿಯಂ ನಡುವೆ ಸಂಪರ್ಕ ಕಲ್ಪಿಸಲಾಗುವುದು. ಇಲ್ಲಿಗೆ ಬರುವ ಪ್ರವಾಸಿಗರು ಒಮ್ಮೆಲೆ 3 ಸ್ಥಳಗಳ ಪರಿಸರ ಅನುಭವ ಪಡೆಯುವಂತೆ ಮಾಡಲಾಗುತ್ತದೆ. ಮೃಗಾಲಯದ ಒಳಗಡೆ ಜಿಪ್‌ವಾಕ್ ಇನ್ನಿತರ ಆಟಗಳು, ಸುಂದರ ಸ್ಥಳಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುವಂತೆ ಮಾಡಲಾಗುತ್ತದೆ ಎಂದರು.


ಕಳೆದ ರಾಜ್ಯ ಹಾಗೂ ಕೇಂದ್ರ ಬಜೆಟ್‌ನಿಂದ ಪ್ರಸಾದ್ ಯೋಜನೆಗೆ ಬಂದಿರುವ ಅನುದಾನದಿಂದ ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯನ್ನು ನೇಮಿಸಲಾಗುತ್ತದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಪ್ರತಿಯೊಂದು ಪ್ರವಾಸಿ ತಾಣಗಳಿಗೂ ಪ್ರತ್ಯೇಕ ಸಮಿತಿಯನ್ನು ರಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ಮಾಡಲಾಗುತ್ತದೆ ಎಂದು ತಿಳಿಸಿದರು.


ಮೈಸೂರಿಗೆ ಬಂದವರಿಗೆ ಸಂಜೆ ಸಮಯದಲ್ಲಿ ವರ್ಣರಂಜಿತ ಅರಮನೆಯನ್ನು ನೋಡಬಹುದಾಗಿದ್ದು, ವಿದೇಶ, ನೆರೆಯ ರಾಜ್ಯ ಹಾಗೂ ಸ್ಥಳೀಯ ಪ್ರವಾಸಿಗರಿಗೆ ಯಾವುದೇ ರೀತಿಯ ಬೇಜಾರಿಲ್ಲದೆ ಬಹಳ ಸಂತೋಷದಿಂದ ಹಿಂತಿರುಗುವಂತೆ ಮಾಡಲು ಪ್ರತಿಯೊಂದು ಸ್ಥಳಗಳನ್ನು ವೈವಿಧ್ಯಮಯವಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.


ಶಾಸಕ ಟಿ.ಎಸ್.ಶ್ರೀವತ್ಸ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಪ್ರವಾಸೋದ್ಯಮ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್, ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ಇನ್ನಿತರರು ಉಪಸ್ಥಿತರಿದ್ದರು.