ಜಿಲ್ಲೆ

ಬನಶಂಕರಿ ದೇವಾಲಯದ ಹುಂಡಿಯಲ್ಲಿ 45.41 ಲಕ್ಷ ರೂ. ಸಂಗ್ರಹ

ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕಳೆದ ಒಂದೂವರೆ ತಿಂಗಳಲ್ಲಿ 45.41 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.

ದೇವಾಲಯದಲ್ಲಿ ಇರುವ ಎಲ್ಲ 13 ಹುಂಡಿಗಳನ್ನು ತೆರೆದು, ಕಾಣಿಕೆ ಹಣ ಎಣಿಕೆ ಮಾಡಲಾಯಿತು. ಈ ವೇಳೆ 43,90,383 ರೂ. ನೋಟುಗಳು ಹಾಗೂ 1,51,578 ರೂ. ಮೌಲ್ಯದ ನಾಣ್ಯಗಳು ಸಂಗ್ರಹವಾಗಿದ್ದು, ಒಟ್ಟಾರೆ 45,41,961 ರೂ. ಹಣ ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದರು.

2 ಸಾವಿರ ರೂ. ಮುಖಬೆಲೆಯ 52 ನೋಟುಗಳು, 500 ರೂ. ನ 3,078 ನೋಟುಗಳು, 200 ರೂ.ನ 1,056 ನೋಟುಗಳು, 10 ರೂ.ನ 41,450 ನೋಟುಗಳು, 20 ರೂ.ನ 22,662 ನೋಟುಗಳು ಹುಂಡಿಗಳಲ್ಲಿ ಸಿಕ್ಕಿವೆ. ಉಳಿದಂತೆ 100, 50 ರೂ.ನ ನೋಟುಗಳು ಸಂಗ್ರಹವಾಗಿವೆ. ಜತೆಗೆ 132 ಗ್ರಾಂ 800 ಮಿಲಿ ಚಿನ್ನ ಮತ್ತು 809 ಗ್ರಾಂ ಬೆಳ್ಳಿ ನಾಣ್ಯಗಳು ಕೂಡ ಹುಂಡಿಗಳಲ್ಲಿ ಸಿಕ್ಕಿವೆ.

ಶಕ್ತಿ ಯೋಜನೆಯ ಪರಿಣಾಮ ಹಾಗೂ ಆಷಾಢ ಶುಕ್ರವಾರಗಳಂದು ದೇವಾಲಯಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಹುಂಡಿಗಳು ತುಂಬಿದ್ದವು. ಹೀಗಾಗಿ ಒಂದೂವರೆ ತಿಂಗಳ ಹಿಂದೆ ತೆರೆದಿದ್ದ ಹುಂಡಿಗಳನ್ನು ಇದೀಗ ಮತ್ತೆ ತೆರೆಯಲಾಗಿದೆ ಎಂದು ಹೇಳಿದರು.