ಎನ್.ಆರ್.ಪುರ ಗುರುಭವನದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ ನಡೆಯಿತು. ಎಂ.ಎಸ್.ಮಂಜುನಾಥ್, ಸಿದ್ದೇಶ್, ಗೌತಮ್, ಆರ್.ಸುರೇಶ್ ಇದ್ದರು.  
ಜಿಲ್ಲೆ

449 ಲೈನ್‌ಮ್ಯಾನ್‌ಗಳ ನೇಮಕಾತಿಗೆ ಶೀಘ್ರ ಆದೇಶ

ಎನ್.ಆರ್.ಪುರ: ಶೀಘ್ರದಲ್ಲೇ ಮೆಸ್ಕಾಂ ಶಿವಮೊಗ್ಗ ಹಾಗೂ ಮಂಗಳೂರು ವಲಯಕ್ಕೆ ಸರ್ಕಾರದಿಂದ 449 ಲೈನ್‌ಮ್ಯಾನ್‌ಗಳ ನೇಮಕಾತಿ ಆದೇಶ ಬರಲಿದೆ ಎಂದು ಮೆಸ್ಕಾಂ ಚಿಕ್ಕಮಗಳೂರು ಅಧೀಕ್ಷಕ ಇಂಜಿನಿಯರ್ ಎಂ.ಎಸ್.ಮಂಜುನಾಥ್ ತಿಳಿಸಿದರು.

ಗುರುಭವನದಲ್ಲಿ ಮೆಸ್ಕಾಂ ಬಾಳೆಹೊನ್ನೂರು ಉಪ ವಿಭಾಗ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾಹಿತಿ ನೀಡಿ, ಚಿಕ್ಕಮಗಳೂರು ಜಿಲ್ಲೆಗೆ 100 ರಿಂದ 120 ಲೈನ್‌ಮ್ಯಾನ್‌ಗಳು ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಪ್ರತಿ ಉಪ ಕೇಂದ್ರಕ್ಕೆ 9 ರಿಂದ 10 ಲೈನ್‌ಮ್ಯಾನ್ ಸಿಗಬಹುದು. ಮಲೆನಾಡು ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ಲೈನ್‌ಮ್ಯಾನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಕೊಪ್ಪ ವಿಭಾಗದ 8 ಶಾಖೆಗಳಿಗೆ ಲೈನ್ ಕ್ಲಿಯರ್ ಮಾಡಲು ಹೊರ ಗುತ್ತಿಗೆಯ 41 ಸಿಬ್ಬಂದಿ, 3 ವಾಹನ ನೀಡಲಾಗಿತ್ತು. ವಿದ್ಯುತ್ ಲೈನ್ ಅಡಿ ಹಾಗೂ ಪಕ್ಕದ 6 ರಿಂದ 8 ಅಡಿ ದೂರದಲ್ಲಿ ಯಾವುದೇ ಗಿಡಗಳನ್ನು ನೆಡಬಾರದು ಎಂದರು.

ಬಾಳೆಕೊಪ್ಪದ ಹೊಸ ರೋಡ್‌ನಲ್ಲಿ ಪವರ್ ಸ್ಟೇಷನ್‌ಗೆ ಜಾಗ ಗುರುತಿಸಲಾಗಿದೆ. ಆದರೆ ಅರಣ್ಯ ಇಲಾಖೆಗೆ ಜಾಗ ಸೇರಿರುವುದರಿಂದ ವೆಬ್‌ಸೈಟ್ ಮೂಲಕ ಜಾಗ ಹಸ್ತಾಂತರ ಮಾಡುವಂತೆ ಅರಣ್ಯ ಇಲಾಖೆಗೆ ಆನ್‌ಲೈನ್ ಅರ್ಜಿ ಹಾಕಲಾಗಿದೆ ಎಂದರು.

ಗ್ರಾಹಕ ಅಳಲಗೆರೆ ಚೆರಿಯನ್ ಮಾತನಾಡಿ, ಬಾಳೆಹೊನ್ನೂರು ಉಪ ವಿಭಾಗದಲ್ಲಿ ಲೈನ್‌ಮ್ಯಾನ್ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು. ಮಲೆನಾಡಿನ ಭಾಗದಲ್ಲಿ ಮಳೆ, ಗಾಳಿ ಜಾಸ್ತಿ ಇರುವುದರಿಂದ ಯುಜಿ ಪೈಪ್ ಅಳವಡಿಸಲು ಸಾಧ್ಯವೇ ಎಂದು ಪರಿಶೀಲನೆ ಮಾಡಬೇಕು. ಯುಜಿ ಪೈಪ್ ಹಾಕಿದರೆ ವಿದ್ಯುತ್ ಗುಣಮಟ್ಟ ಜಾಸ್ತಿಯಾಗಬಹುದು. ಮುತ್ತಿನಕೊಪ್ಪದಲ್ಲಿ ಮೆಸ್ಕಾಂ ಕಚೇರಿ ಕೆಲಸ ಪೂರ್ಣಗೊಂಡು ಎರಡು ವರ್ಷ ಆಗಿದೆ. ಇನ್ನೂ ಉದ್ಘಾಟನೆಯಾಗಿಲ್ಲ. ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ ಹೆಚ್ಚುವರಿ ವಿದ್ಯುತ್ ಕಂಬಗಳನ್ನು ದಾಸ್ತಾನು ಮಾಡಬೇಕು. ಮಳೆಗಾಲದ ಪೂರ್ವ ಲೈನ್ ಕ್ಲಿಯರ್ ಮಾಡಲು ಗ್ರಾಮೀಣ ಭಾಗದ ಯುವಕರನ್ನು ನೇಮಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಮೆಸ್ಕಾಂ ಕೊಪ್ಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಿದ್ದೇಶ್, ಬಾಳೆಹೊನ್ನೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೌತಮ್, ಎನ್.ಆರ್.ಪುರ ಸೇವಾ ಕೇಂದ್ರದ ಕಿರಿಯ ಇಂಜಿನಿಯರ್ ಆರ್.ಸುರೇಶ್, ಬಾಳೆಹೊನ್ನೂರು ಕಿರಿಯ ಇಂಜಿನಿಯರ್ ಮಹಮ್ಮದ್‌ತಾಜ್ ಇದ್ದರು.