ಜಿಲ್ಲೆ

ಬೆಂ-ಮೈ ಹೈವೇಯಲ್ಲಿ 438 ಕೋಟಿ ರೂ. ಟೋಲ್ ಸಂಗ್ರಹ

* ಸಂಸತ್‌ನಲ್ಲಿಯೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಹಲವು ನ್ಯೂನತೆಗಳ ನಡುವೆಯೇ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು - ಮೈಸೂರು ಅಕ್ಸೆಸ್ ಕಂಟ್ರೋಲ್ ಹೆದ್ದಾರಿ (ಎನ್ ಎಚ್ - 275) ಒಂದೂವರೆ ವರ್ಷದ ಅವಧಿಯಲ್ಲಿ ಸಂಗ್ರಹಿಸಿರುವ ಟೋಲ್‌ನ ಮೊತ್ತ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಹೌದು.. 2023ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು - ಮೈಸೂರು ಅಕ್ಸೆಸ್ ಕಂಟ್ರೋಲ್ ಹೆದ್ದಾರಿಯಲ್ಲಿ 2023ರ ಏಪ್ರಿಲ್‌ನಿಂದ ಟೋಲ್ ಸಂಗ್ರಹ ಆರಂಭಗೊಂಡಿದೆ. ಒಂದೂವರೆ ವರ್ಷದಲ್ಲಿ ಹೆದ್ದಾರಿಯಲ್ಲಿ ಇರುವ ಎರಡು ಟೋಲ್‌ಗಳಿಂದ ಒಟ್ಟು 438 ಕೋಟಿ ರೂ. ಸಂಗ್ರಹವಾಗಿದೆ.

ಎಲ್ಲೆಲ್ಲಿ ಎಷ್ಟು?:

ಬೆಂಗಳೂರಿನ ಕೆಂಗೇರಿ ಬಳಿಯ ನೈಸ್ ರಸ್ತೆಯಿಂದ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆವರೆಗೆ ಒಟ್ಟು 118 ಕಿಮೀ ಉದ್ದದ ಈ ಹೆದ್ದಾರಿಯಲ್ಲಿ ಎರಡು ಹಂತದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಸಾಗುವ ವಾಹನಗಳಿಗೆ ಕಣಮಿಣಿಕೆ, ಶೇಷಗಿರಿಹಳ್ಳಿ ಬಳಿ ಮತ್ತು ಮೈಸೂರಿನಿಂದ ಬೆಂಗಳೂರಿಗೆ ಸಾಗುವ ವಾಹನಗಳಿಗೆ ಮಂಡ್ಯದ ಗಣಂಗೂರು ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ಕಣಮಿಣಿಕೆ ಟೋಲ್ ಪ್ಲಾಜಾದಲ್ಲಿ ಒಟ್ಟು 278.91 ಕೋಟಿ ರೂ., ಗಣಂಗೂರು ಟೋಲ್ ಪ್ಲಾಜಾದಲ್ಲಿ 159.37 ಕೋಟಿ ರೂ. ಸಂಗ್ರಹವಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಂಸದ ಅಸಾವುದ್ಧೀನ್ ಓವೈಸಿ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪ್ರಸ್ತುತ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ 170-1100 ರೂ.ವರೆಗೆ ವಿವಿಧ ವಾಹನಗಳಿಗೆ ಟೋಲ್ ವಿಧಿಸಲಾಗುತ್ತಿದ್ದರೆ, ಗಣಂಗೂರು ಟೋಲ್ ಪ್ಲಾಜಾದಲ್ಲಿ 160-1030 ರೂ. ವಿಧಿಸಲಾಗುತ್ತಿದೆ.

ಅಚ್ಚರಿಗೆ ಕಾರಣ

ಬೆಂಗಳೂರು - ಮೈಸೂರು ಅಕ್ಸೆಸ್ ಕಂಟ್ರೋಲ್ ಹೆದ್ದಾರಿ ಸಾವಿನ ಹೆದ್ದಾರಿ ಎಂದೇ ಅಪಖ್ಯಾತಿಯನ್ನು ಆರಂಭದ ದಿನಗಳಲ್ಲಿ ಪಡೆದುಕೊಂಡಿತ್ತು. ಅಲ್ಲದೆ, ಹೆದ್ದಾರಿಯಲ್ಲಿ ಇರಬೇಕಾದ ಮೂಲ ಸೌಕರ್ಯ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಲೇ ಇವೆ. ಇದರ ಜತೆಗೆ ಟೋಲ್ ಪಾವತಿಸಿ ಓಡಾಡುವ ವಾಹನ ಸವಾರರಿಗಿಂತ ಟೋಲ್ ತಪ್ಪಿಸಿ ಹೋಗುವ ಮಂದಿಯೇ ಹೆಚ್ಚು. ಹಲವಾರು ಕಡೆಗಳಲ್ಲಿ ಈಗಲೂ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಅಂತಿಮ ನಿರ್ಧಾ ಕೈಗೊಂಡಿಲ್ಲ. ಇದರ ನಡುವೆಯೇ ನೂತನ ಹೆದ್ದಾರಿಯಲ್ಲಿ ಒಂದೂವರೆ ವರ್ಷದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಟೋಲ್ ಸಂಗ್ರಹವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಸೂಕ್ತ ಕ್ರಮ ಅಗತ್ಯ

ದಿನದಿಂದ ದಿನಕ್ಕೆ ಹೊಸ ಹೆದ್ದಾರಿ ಬಳಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನೂತನ ಹೆದ್ದಾರಿ ಉದ್ಘಾಟನೆಗೊಂಡು ಎರಡೂವರೆ ವರ್ಷಗಳು ಕಳೆದಿದ್ದರೂ, ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಸ್ಟೇಷನ್‌ಗಳು, ಹೋಟೆಲ್‌ಗಳು, ಶೌಚಗೃಹಗಳು ಸೇರಿ ಇತರ ಮೂಲ ಸೌಕರ್ಯ ಒದಗಿಸುವಲ್ಲಿ ಹೆದ್ದಾರಿ ಪ್ರಾಧಿಕಾರ ಹಿಂದೆ ಬಿದ್ದಿದೆ. ಇವುಗಳ ಜತೆಗೆ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರಮುಖ ಪಟ್ಟಣಗಳ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳ ಬಗ್ಗೆಯೂ ಇನ್ನು ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಈಗಲಾದರೂ ಹೆದ್ದಾರಿ ಪ್ರಾಧಿಕಾರ ಇದರ ಬಗ್ಗೆ ಗಮನ ಹರಿಸಬೇಕಿದೆ.

ದಶ ಕೋಟಿ ಸಂಗ್ರಹ

ದೇಶದಲ್ಲಿ ಟೋಲ್ ಸಂಗ್ರಹ ಪದ್ಧತಿ ಆರಂಭಗೊಂಡ 2008 ರಿಂದ ಆರಂಭಗೊಂಡು 2024 ಸೆಪ್ಟೆಂಬರ್‌ವರೆಗೆ ರಾಜ್ಯದ 31 ಟೋಲ್ ಪ್ಲಾಜಾಗಳಲ್ಲಿ ಒಟ್ಟು 10,605.2 ಕೋಟಿ ರೂ.ಗಳನ್ನು ಟೋಲ್ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ನಿತಿನ್ ಗಡ್ಕರಿ ಅವರು ಸಂಸತ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಟೋಲ್ ಸಂಗ್ರಹವಾಗಿರುವುದು ರಾಷ್ಟ್ರೀಯ ಹೆದ್ದಾರಿ 44ರ ಸಾದಹಳ್ಳೀ ಟೋಲ್ ಪ್ಲಾಜಾದಲ್ಲಿ ಈವರೆವಿಗೂ 1,962 ಕೋಟಿ ರೂ. ಟೋಲ್ ಸಂಗ್ರಹಿಸಲಾಗಿದೆ. 2011ರ ಏಪ್ರಿಲ್ 25ರಿಂದ ಇಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿದೆ.