ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಾಗರಬಾವಿ ಗ್ರಾಮ ವ್ಯಾಪ್ತಿಯಲ್ಲಿದ್ದ ತನ್ನ 6 ಎಕರೆ ವಿಸ್ತೀರ್ಣದ 430 ಕೋಟಿ ರೂ. ಮೊತ್ತದ ಸ್ವತ್ತನ್ನು ಮರುವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಿ ಶನಿವಾರ ಯಶಸ್ವಿಯಾಗಿದೆ.
ನಾಗರಬಾವಿ ಗ್ರಾಮದ ಸರ್ವೆ ನಂ.78ರಲ್ಲಿ ಬಿಡಿಎ ಆರು ಎಕರೆಯನ್ನು ಹೊಂದಿತ್ತು. ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಕೆಲವರು ಅನಧಿಕೃತವಾಗಿ ಗೋಡೌನ್, ಶೆಡ್‌ಗಳನ್ನಾಗಿ ಮಾಡಿಕೊಂಡಿದ್ದರು. ಜತೆಗೆ ಮೂಲ ಭೂಮಾಲೀಕರಿಗೆ ಈ ಮೊದಲೇ ಪರಿಹಾರ ವಿತರಣೆ ಆಗಿದ್ದರೂ, ಅನ್ಯ ಕಾರಣ ನೀಡಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಕಾರಣದಿಂದ ನಗರದ ಆಯಾಕಟ್ಟಿನ ಭಾಗದಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಜಾಗವನ್ನು ಉಳಿಸಿಕೊಳ್ಳಲು ಪ್ರಾಧಿಕಾರವು ಹೈಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿತ್ತು.
ಪ್ರಕರಣ ಸಂಬಂಧ ಶುಕ್ರವಾರ ಬಿಡಿಎ ಪರವಾಗಿ ತೀರ್ಪು ನೀಡಲಾಗಿತ್ತು. ಇದಾಗಿ 24 ಗಂಟೆಯೊಳಗೆ ಪ್ರಾಧಿಕಾರವು ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿತು. ಹತ್ತಾರು ಶೆಡ್‌ಗಳಿದ್ದ ಕಾರಣ ಅವರೆಲ್ಲರೂ ವಿರೋಧ ವ್ಯಕ್ತಪಡಿಸಲಿದ್ದಾರೆಂದು ಅರಿತು ಎರಡು ತುಕಡಿ ಕೆಎಸ್‌ಆರ್‌ಪಿ ಪಡೆ, 150 ಪೊಲೀಸರನ್ನು ಬಳಸಿಕೊಳ್ಳಲಾಯಿತು. ಜೆಸಿಬಿ ಯಂತ್ರಗಳು ಸೇರಿ 25 ವಾಹನಗಳನ್ನು ಬಳಸಿ ಅನಧಿಕೃತ ಭಾಗಗಳನ್ನು ಹೊರಸಾಗಿಸಲಾಯಿತು. ಸಂಜೆ 6ರ ವೇಳೆಗೆ ವಶಕ್ಕೆ ಪಡೆದ ಜಮೀನಿಗೆ ತಂತಿಬೇಲಿ ಹಾಕುವ ಕಾರ್ಯವನ್ನು ಆರಂಭಿಸಿದ್ದು, ಭಾನುವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಡಿಎ ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರ ಜಿ.ರವಿಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಇದಲ್ಲದೆ, ನಾಗರಬಾವಿಯ ಇನ್ನೊಂದು ಸ್ಥಳದಲ್ಲಿ ಅರು ನಿವೇಶನಗಳನ್ನು (30 ಕೋಟಿ ರೂ. ಮೌಲ್ಯದ್ದು) ಸುಪರ್ದಿಗೆ ಪಡೆದಿದೆ.
ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯಪಡೆಯ ಆರಕ್ಷಕ ಅಧೀಕ್ಷಕ ಲಕ್ಷ್ಮೀಗಣೇಶ್, ಅಧೀಕ್ಷಕ ಇಂಜಿನಿಯರ್ ಉಮೇಶ್ ಮತ್ತಿತರರಿದ್ದರು.