ಜಿಲ್ಲೆ

42ನೇ ಕಾಪಿಕಾನ್ ಸಮ್ಮೇಳನ ಜೂ. 13ರಿಂದ

ಮರಿದೇವ ಹೂಗಾರ

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಧಾರವಾಡ ಎಸ್‌ಡಿಎಂ ಮತ್ತು ಕೆಎಲ್‌ಇ ಸಂಸ್ಥೆ, ಭಾರತೀಯ ವೈದ್ಯರ ಸಂಘ ಹು-ಧಾ ಶಾಖೆ ವತಿಯಿಂದ ಜೂ. 13, 14 ಮತ್ತು 15ರಂದು 42ನೇ ಕಾಪಿಕಾನ್-2025 ಸಮ್ಮೇಳನವನ್ನು ಇಲ್ಲಿಯ ಕೆಎಂಸಿಆರ್‌ಐ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಾಪಿಕಾನ್ ಆಯೋಜನಾ ಸಮಿತಿ ಅಧ್ಯಕ್ಷ ಡಾ. ಈಶ್ವರ ಹಸಬಿ ಹೇಳಿದರು.

ಇಲ್ಲಿಯ ಕೆಎಂಸಿಆರ್‌ಐ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜೂ. 13ರಂದು ಸಂಜೆ 6ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಡಾ. ಜ್ಯೋತಿರ್ಮಯ ಪಾಲ್ ಹಾಗೂ ಡಾ. ನರಸಿಂಹಲು ಅವರು ಭಾಗವಹಿಸುವರು.

2014ರ ನಂತರ ಈ ಸಮ್ಮೇಳನವನ್ನು ಸಂಸ್ಥೆಯಲ್ಲಿ ಆಯೋಜಿಸಲಾಗುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ಸಂಶೋಧಕರು, ಆರೋಗ್ಯ ಸೇವಾ ವೃತ್ತಿಪರರು ಸೇರಿದಂತೆ ಸುಮಾರು 1800ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ 1635 ಜನರು ಹೆಸರು ನೋಂದಾಯಿಸಿದ್ದಾರೆ. ಸಮ್ಮೇಳನಕ್ಕೆ ಎಪಿಐ ದಕ್ಷಿಣ ಮಧ್ಯ ವಲಯ ಮತ್ತು ಎಪಿಐ ದಕ್ಷಿಣ ವಲಯ ಸಹಕಾರ ನೀಡುತ್ತಿವೆ. ಆಧುನಿಕ ವೈದ್ಯಕೀಯ ಕ್ಷೇತ್ರದ ಇತ್ತೀಚಿನ ಪ್ರಗತಿಗಳು, ಹೊಸ ಅಭ್ಯಾಸಗಳು ಮತ್ತು ಉದಯೋನ್ಮುಖ ಸವಾಲುಗಳ ಕುರಿತು ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಎಂದರು.

ಸಮ್ಮೇಳನದಲ್ಲಿ 85 ವಿಚಾರಗೋಷ್ಠಿಗಳು, 900 ಪ್ರಬಂಧ ಮಂಡಿಸಲಾಗುವುದು. ಸಂಶೋಧನೆ, ಆಂತರಿಕ ಔಷಧ, ಹೃದ್ರೋಗ, ಸಾಂಕ್ರಾಮಿಕ ರೋಗಗಳು, ನಿರ್ಣಾಯಕ ಆರೈಕೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮುಂತಾದ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ ಎಂದರು.

ಕಾಪಿಕಾನ್ ಆಯೋಜನಾ ಸಮಿತಿ ಮುಖ್ಯ ಸಲಹೆಗಾರ ಡಾ.ಜಿ.ಬಿ. ಸತ್ತೂರ ಮಾತನಾಡಿ, ಈ ಸಮ್ಮೇಳನದಲ್ಲಿ ಮೂರು ಪ್ರಮುಖ ಕಾರ್ಯಾಗಾರಗಳು ನಡೆಯಲಿವೆ. ಡಾ. ಸುನೀಲ ಕರಿ, ಡಾ. ರಾಜೀವ್ ಜೋಶಿ ಮತ್ತವರ ತಂಡದಿಂದ ಮಧುಮೇಹ ಪಾದ ಕಾರ್ಯಾಗಾರ, ಡಾ. ಶೈಲೇಂದ್ರ .ಡಿ.ಎಸ್., ಡಾ. ಗಂಗಾಧರ ಪಾಟೀಲ ಮತ್ತವರ ತಂಡದಿಂದ ಚೆಸ್ಟ್ ಅಲ್ಟ್ರಾ ಸೋನೊಗ್ರಾಫಿ ಇನ್ ಕ್ರಿಟಿಕಲ್ ಕೇರ್, ಬೆಂಗಳೂರಿನ ಡಾ. ಪ್ರದೀಪ ರಂಗಪ್ಪ ಮತ್ತವರ ತಂಡವು ಯಾಂತ್ರಿಕ ವೆಂಟಿಲೇಷನ್ ಕುರಿತ ಕಾರ್ಯಾಗಾರಗಳು ನಡೆಯಲಿವೆ. 500ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ. ಔಷಧ ಮಳಿಗೆಗಳು, ಇಳಕಲ್ ಸೀರೆ ಸೇರಿದಂತೆ 35ಕ್ಕೂ ಅಧಿಕ ಮಳಿಗೆಗಳು ಸಮ್ಮೇಳನದಲ್ಲಿರಲಿವೆ ಎಂದರು.

ಡಾ. ರಾಘವೇಂದ್ರ ಬೆಳಗಾಂವ್ಕರ, ಡಾ. ಚಂದ್ರಶೇಖರ, ಡಾ. ಉದಯ ಬಾಂದೆ, ಡಾ. ಕಿರಣ, ಡಾ. ಅವಿನಾಶ ಇಟಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.