ಕೇಶವಮೂರ್ತಿ ವಿ.ಬಿ. ಹಾವೇರಿ
ಹಾವೇರಿ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿ 12.41 ಲಕ್ಷ ಜಾನುವಾರುಗಳಿವೆ. ಆದರೆ, ಇವುಗಳ ಚಿಕಿತ್ಸೆಗೆ ಕೇವಲ 42 ಪಶು ವೈದ್ಯರಿದ್ದಾರೆ. ಪಶುವೈದ್ಯರ ಕೊರತೆಯಿಂದಾಗಿ ರೈತರು, ಹೈನುಗಾರರು ಜಾನುವಾರುಗಳ ಚಿಕಿತ್ಸೆಗೆ ಪರದಾಡುವ ಸ್ಥಿತಿ ಇದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಗೆ ಒಟ್ಟಾರೆ 594 ಹುದ್ದೆಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಸದ್ಯಕ್ಕೆ 171 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಬರೋಬ್ಬರಿ 423 ಹುದ್ದೆಗಳು ಖಾಲಿ ಇವೆ. 108 ಪಶುವೈದ್ಯರ ಪೈಕಿ ಕೇವಲ 42 ವೈದ್ಯರಿದ್ದು, 66 ಹುದ್ದೆಗಳು ಖಾಲಿ ಇವೆ.
ರಾಷ್ಟ್ರೀಯ ಜಾನುವಾರು ಅಭಿವೃದ್ಧಿ ಮಾರ್ಗಸೂಚಿ ಅನ್ವಯ ಪ್ರತಿ 5 ಸಾವಿರ ಜಾನುವಾರುಗಳಿಗೆ ಒಬ್ಬ ಪಶು ವೈದ್ಯರು ಇರಬೇಕೆಂಬ ನಿಯಮವಿದೆ. ಆದರೆ, ಈ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ. ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿ ಪ್ರಕಾರ 3.46 ಲಕ್ಷ ದೊಡ್ಡ ಜಾನುವಾರುಗಳಿವೆ. ಕುರಿ, ಆಡು, ಕುದುರೆ, ಕತ್ತೆ, ಮೊಲ, ಇತರೆ ಪ್ರಾಣಿಗಳು ಸೇರಿ 9 ಲಕ್ಷಕ್ಕೂ ಅಧಿಕ ಸಣ್ಣ ಜಾನುವಾರುಗಳಿದ್ದು, ಒಟ್ಟಾರೆ 12.41 ಲಕ್ಷ ಜಾನುವಾರುಗಳಿವೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಕಾರ್ಯ ಭರದಿಂದ ಸಾಗಿದ್ದು, ರೈತರು ಕೃಷಿ ಚಟುವಟಿಕೆಗೆ ಜಾನುವಾರುಗಳನ್ನೇ ಅವಲಂಬಿಸಿದ್ದಾರೆ. ಜತೆಗೆ ಹೈನುಗಾರಿಕೆಯಿಂದಲೇ ಜೀವನ ಸಾಗಿಸುವವರಿದ್ದಾರೆ. ರೋಗ, ಮತ್ತಿತರ ಸಮಸ್ಯೆಗಳಾದ ಜಾನುವಾರುಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಒಬ್ಬ ಪಶುವೈದ್ಯರು ಎರಡು, ಮೂರು ಕಡೆಗಳಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಹೀಗಾಗಿ, ಈಗಿರುವ ಸಿಬ್ಬಂದಿ ಮೇಲೆ ಕಾರ್ಯಭಾರ ಒತ್ತಡ ಸೃಷ್ಟಿಯಾಗಿದೆ.
ಸಿಬ್ಬಂದಿ ಕೊರತೆ ನೀಗಿಸಲು ಜಿಲ್ಲಾ ಪಶು ಇಲಾಖೆ ಅಧಿಕಾರಿಗಳು ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೂ, ನೇಮಕ ಪ್ರಕ್ರಿಯೆ ಆಗಿಲ್ಲ. ತಾತ್ಕಾಲಿಕವಾಗಿ 81 ಹೊರಗುತ್ತಿಗೆ ಆಧಾರದಲ್ಲಿ ಡಿ ದರ್ಜೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.
ಇಷ್ಟೊಂದು ಪ್ರಮಾಣದ ಜಾನುವಾರುಗಳಿದ್ದರೂ ಸರ್ಕಾರ ಮಾತ್ರ ಖಾಲಿ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಖಾಲಿ ಹುದ್ದೆಗಳ ನೇಮಕಕ್ಕೆ ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಹಾವೇರಿ ನಗರದಲ್ಲಿ 1 ಜಿಲ್ಲಾಮಟ್ಟದ ಪಾಲಿಕ್ಲಿನಿಕ್, 50 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 73 ಪಶು ಚಿಕಿತ್ಸಾಲಯಗಳು, 19 ಪಶು ಆಸ್ಪತ್ರೆಗಳು, 7 ಮೊಬೈಲ್ ವೆಟರ್ನರಿ ಕ್ಲಿನಿಕ್ (ತಾಲೂಕಿಗೊಂದು) ಸೇರಿ ಒಟ್ಟು 150 ಪಶು ಆಸ್ಪತ್ರೆಗಳಿವೆ.
ಪಶುವೈದ್ಯರ ಕೊರತೆ ಇದ್ದರೂ, ಇರುವ ವೈದ್ಯರಿಂದಲೇ ಕೊರತೆಯಾಗದಂತೆ ಸೇವೆ ನೀಡಲಾಗುತ್ತಿದೆ. ಪಶು ವೈದ್ಯರು ಸೇರಿದಂತೆ ಇತರ ಹುದ್ದೆಗಳ ನೇಮಕಾತಿಗಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. | ಡಾ.ಸತೀಶ ಸಂತಿ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ