ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಯುತ್ತಿದ್ದರೂ, 40ನೇ ಉಪಕಾಲುವೆಗೆ ನೀರು ಹರಿಸುತ್ತಿಲ್ಲ. ಇದರಿಂದ ಸಸಿ ಮಡಿ ಹಾಕಲು ಹಾಗೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ರೈತರು ನಾಲೆ ಬಳಿ ಧರಣಿ ನಡೆಸಿದರು.
ಡಿಸೆಂಬರ್ ಆರಂಭದಿಂದಲೂ 40ನೇ ಉಪಕಾಲುವೆಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಇದರಿಂದ ಹಿಂಗಾರು ಹಂಗಾಮಿನ ಭತ್ತ ನಾಟಿಗಾಗಿ ಹಾಕಿರುವ ಸಸಿಮಡಿಗಳಿಗೆ ನೀರಿನ ಕೊರತೆಯಾಗುತ್ತಿದೆ. ಟ್ಯಾಂಕರ್ ನೀರಿನಿಂದ ಬೆಳೆ ರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಅರಳಹಳ್ಳಿ ಗ್ರಾಮಸ್ಥರು ಕುಡಿವ ನೀರಿಗಾಗಿ ಇದೇ ಕಾಲುವೆ ಅವಲಂಬಿಸಿದ್ದಾರೆ. ಕಾಲುವೆ ಗೇಜ್‌ನಲ್ಲಿ ಭಾರಿ ವ್ಯತ್ಯಾಸವಿದೆ. ಉಳಿದ ಉಪಕಾಲುವೆಗಳಿಗೆ ಹರಿಸುವಂತೆ 40ನೇ ಉಪಕಾಲುವೆಗೆ ಸಮಪರ್ಕವಾಗಿ ನೀರು ಹರಿಸದೆ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಶಾಸಕರು, ಇಲಾಖೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲವ ಎಂದು ಅಸಮಾಧಾನ ವ್ಯಕ್ತಪಡಿಸಿದರು.