ಪಡುಬಿದ್ರಿ: ಕಾಪು ತಾಲೂಕಾದ್ಯಂತ ಪ್ರತೀ ದಿನ 500 ಲೀಟರ್ ಹಾಲಿಗೆ ಬೇಡಿಕೆಯಿದ್ದು ಅಗತ್ಯಕ್ಕೆ ತಕ್ಕಂತೆ ಹಾಲು ತರಿಸಿಕೊಂಡು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ನಿರೀಕ್ಷಕ ಕೆ.ರವಿಶಂಕರ್ ಹೇಳಿದರು.
ದ.ಕ.ಹಾಲು ಒಕ್ಕೂಟದಿಂದ ಸ್ಲಂ, ಕೊಳಗೇರಿ, ವಲಸೆ ಮತ್ತು ಕೂಲಿ ಕಾರ್ಮಿಕರಿಗೆ ಬಿಡುಗಡೆಗೊಳಿಸಿರುವ 400 ಲೀಟರ್ ಹಾಲನ್ನು ಕರ್ನಾಟಕ ಹಾಲು ಮಹಾಮಂಡಲ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಅವರಿಂದ ಶುಕ್ರವಾರ ಸ್ವೀಕರಿಸಿ ಮಾತನಾಡಿದರು. ಕೆಎಂಎಫ್ ಉತ್ಪನ್ನಗಳ ವಿತರಕ ಹರೀಶ್ ನಾಯಕ್ ಕಾಪು, ವಿವಿಧ ಇಲಾಖಾಧಿಕಾರಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
220 ಲೀಟರ್ ವಿತರಣೆ: ಕಾಪು ಪುರಸಭೆಗೆ ಬಿಡುಗಡೆಗೊಂಡಿರುವ 220 ಲೀ. ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ ಆರ್. ಮೆಂಡನ್ ಚಾಲನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ಮಾತನಾಡಿ, ಹಾಲು ಪೂರೈಕೆ ಯೋಜನೆಗೆ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 208 ಕುಟುಂಬಗಳನ್ನು ಗೊತ್ತುಪಡಿಸಲಾಗಿದ್ದು ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಬಡ ಕುಟುಂಬಗಳಿಗೆ ಲಾಲಾಜಿ ಆರ್.ಮೆಂಡನ್ ವೈಯಕ್ತಿಕ ನೆಲೆಯಲ್ಲಿ ಅಕ್ಕಿ ಸಹಿತ ವಿವಿಧ ಪಡಿತರ ಸಾಮಗ್ರಿ ವಿತರಿಸಿದರು. ಕಾಪು ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.