ಜಿಲ್ಲೆ

400 ಮುಸ್ಲಿಂ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ರಾಜಣ್ಣ

ಕೊಳ್ಳೇಗಾಲ: ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್‌ನಲ್ಲಿ ಭಾನುವಾರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ 400 ಕುಟುಂಬಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಆಹಾರ ಕಿಟ್ ವಿತರಣೆ ಮಾಡಿದರು.

ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ರಂಜಾನ್ ಹಬ್ಬದಲ್ಲಿ ಮುಸ್ಲಿಮರು ಒಂದು ತಿಂಗಳು ಕಾಲ ಶ್ರದ್ಧಾಭಕ್ತಿಯಿಂದ ಉಪವಾಸ ಕೈಗೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ. ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸಿಕೊಂಡು ತಾವು ಸಂಪಾದನೆ ಮಾಡಿದ್ದರಲ್ಲಿ ಕೆಲವಷ್ಟು ದಾನ ಮಾಡಿ ವಿಶೇಷವಾದ ಆಚರಣೆ ಆಗಿದೆ ಎಂದರು.

ಕ್ಷೇತ್ರಕ್ಕೆ ಸರ್ಕಾರದಿಂದ ಬಿಡುಗಡೆಯಾದ 25 ಕೋಟಿ ರೂ. ಅನುದಾನದಲ್ಲಿ ಎಲ್ಲ ಧರ್ಮದ, ಎಲ್ಲ ವರ್ಗದ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿದ್ದೇನೆ. ಪಟ್ಟಣದ ಶಾದಿಮಹಲ್ ಪೂರ್ಣ ಗೊಳಿಸಲು ಸಹಕಾರ ನೀಡುತ್ತೇನೆ. ಜತೆಗೆ ಮುಸ್ಲಿಂ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಯನ್ನು ತೆರಯಲು ಕ್ರಮ ವಹಿಸಲಾಗಿದೆ ಎಂದರು.

ಪವಿತ್ರ ದಿನವಾದ ರಂಜಾನ್ ದಾನದ ಸಂಕೇತವಾಗಿದೆ. ಕೆಲವು ವರ್ಷಗಳ ಹಿಂದಿನಿಂದಲೂ ಮುಖಂಡ ಅನ್ಸರ್ ಬೇಗ್ ನನ್ನ ಹೆಸರುಲ್ಲಿ ಬಡವರಿಗೆ ಕಿಟ್ ವಿತರಣೆ ಮಾಡುತ್ತಿದ್ದರು. ಕ್ಷೇತ್ರದ ಎಲ್ಲ ಜನರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಈ ಬಾರಿ ನನ್ನ ಪುತ್ರ ಶ್ರೀವರ್ಧನ್ ಜತೆಗೂಡಿ ನನ್ನ ಬೆಂಬ ಲಿಗನಾದ ಅನ್ಸರ್ ಬೇಗ್ ಮುಸ್ಲಿಂ ಜನಾಂಗದ 400 ಬಡ ಜನರನ್ನು ಗುರುತಿಸಿ ಆಹಾರ ಕಿಟ್ ನೀಡುತ್ತಿರುವುದು ಸಂತಸವಾಗಿದೆ ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಪುತ್ರ ಆರ್.ಕೆ.ಶ್ರೀವರ್ಧನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ, ನಗರಸಭೆ ನಾಮನಿರ್ದೇಶನ ಸದಸ್ಯ ಅನ್ಸರ್‌ಬೇಗ್, ಸ್ವಾಮಿ ನಂಜಪ್ಪ, ನಗರಸಭೆ ಸದಸ್ಯರಾದ ನಾಶೀರ್ ಷರೀಫ್, ಮಂಜುನಾಥ್, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಇನಾಯತ್, ಪ್ರಧಾನ ಕಾರ್ಯದರ್ಶಿ ಆಸೀಫ್ ಉಲ್ಲಾ ಮತ್ತಿತರಿದ್ದರು.