ಜಿಲ್ಲೆ

40 ಚೀಲ ಯೂರಿಯಾ ಅಕ್ರಮ ದಾಸ್ತಾನು ವಶ

Gadag

ಮುಳಗುಂದ: ಸಮೀಪದ ಹೊಸೂರು ಗ್ರಾಮದ ಪ್ಲಾಟ್​ನ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 40 ಚೀಲ ಯೂರಿಯಾ ಗೊಬ್ಬರವನ್ನು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲ ಅವರು ಗುರುವಾರ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ರೈತ ಬೂದಯ್ಯ ಹಿರೇಮಠ ಎಂಬುವವರ ಮೆನೆ ಮೇಲೆ ದಾಳಿ ನಡೆಸಲಾಗಿದೆ. ರೈತರು ಗೊಬ್ಬರ ಕೊರತೆಯಿಂದ ಪರದಾಡುತ್ತಿರುವಾಗ ಇಲ್ಲಿ ಅಕ್ರಮವಾಗಿ ಯಾವುದೇ ದಾಖಲಾತಿಯಿಲ್ಲದೆ ದಾಸ್ತಾನು ಮಾಡಲಾಗಿದೆ. 275 ರೂಪಾಯಿಗೆ ಮಾರಾಟ ಮಾಡಬೇಕಾಗಿದ್ದ ಈ ಗೊಬ್ಬರವನ್ನು ಬೂದಯ್ಯ 500 ರೂ.ಗೆ ಮಾರಾಟ ಮಾಡುತ್ತಿದ್ದರು. ಈತನಿಗೆ ಸುಮಾರು 4 ಎಕರೆಯಷ್ಟು ಸ್ವಂತ ಜಮೀನಿದೆ. ಆದರೆ, ಇಷ್ಟೊಂದು ಗೊಬ್ಬರ ಎಲ್ಲಿಂದ ತಂದಿಟ್ಟಿದ್ದಾರೆ ಎನ್ನುವುದು ತಿಳಿದಿಲ್ಲ. ಅಧಿಕೃತ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಅಧಿಕೃತ ಅಂಗಡಿಗಳಲ್ಲಿಯೂ ಹೆಚ್ಚು ಹಣ ಪಡೆದು ಯೂರಿಯಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಹೆಚ್ಚಿನ ದರಕ್ಕೆ ಮಾರಾಟ ಮಾಡುವವರು ಹಾಗೂ ಯಾವುದೇ ರಸೀದಿಯಿಲ್ಲದೇ ಮಾರಾಟ ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ರೈತನಿಗೆ 2 ಚೀಲ ಗೊಬ್ಬರ ಮಾತ್ರ ಮಾರಾಟ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತಮ ಮಳೆಯಿಂದಾಗಿ ಜಮೀನುಗಳಲ್ಲಿ ತೇವಾಂಶ ಉಂಟಾಗಿದ್ದರಿಂದ ರೈತರು ಹೆಚ್ಚಾಗಿ ಯೂರಿಯಾ ಗೊಬ್ಬರ ಬಳಸುತ್ತಿದ್ದಾರೆ. ಹೀಗಾಗಿ ಗೊಬ್ಬರ ಕೊರತೆ ಎದ್ದು ಕಾಣುತ್ತಿದೆ. ಅಕ್ರಮವಾಗಿ ದಾಸ್ತಾನಿಟ್ಟವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ 5 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. | ಸಂತೋಷ ಪಟ್ಟದಕಲ್ಲ, ಸಹಾಯಕ ಕೃಷಿ ನಿರ್ದೇಶಕರು

ಖರೀದಿಗಾಗಿ ಮುಗಿಬಿದ್ದ ರೈತರು!

ರೋಣ: ಯೂರಿಯಾ ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದ ವಿವಿಧ ಗ್ರಾಮಗಳ ನೂರಾರು ರೈತರು ಇಲ್ಲಿನ ಮಹಾವೀರ ಟ್ರೇಡಿಂಗ್ ಎದುರು ಮುಗಿಬಿದ್ದ ದೃಶ್ಯ ಗುರುವಾರ ಕಂಡು ಬಂದಿತು. ಗೊಬ್ಬರದ ಕೊರತೆಯಿಂದಾಗಿ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿ ಒಬ್ಬರ ಪಕ್ಕ ಮತ್ತೊಬ್ಬರು ನಿಂತುಕೊಳ್ಳಲು ಮುಂದಾದರು. ಗೊಬ್ಬರ ಪಡೆಯುವ ಸಾಹಸದಲ್ಲಿ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದನ್ನೇ ಮರೆತಿದ್ದರು.

ಗುರುವಾರ ಸಂತೆ ದಿನವಾಗಿದ್ದರಿಂದ ಒಮ್ಮೆಲೆ ನೂಕುನುಗ್ಗಲು ಉಂಟಾಗಿದ್ದರಿಂದ ಅದನ್ನು ನಿಯಂತ್ರಿಸಲು ಅಂಗಡಿಕಾರರಿಂದ ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಅಂಗಡಿಗೆ ಬೀಗ ಹಾಕಿಕೊಂಡು ಹೋದರು. ಇದರಿಂದ ರೊಚ್ಚಿಗೆದ್ದ ರೈತರು ರಸ್ತೆ ಮಧ್ಯೆ ಜಮಾವಣೆಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಯೂರಿಯಾ ಗೊಬ್ಬರವನ್ನು ಅಂಗಡಿಯಿಂದ ಜಕ್ಕಲಿ ರಸ್ತೆಯಲ್ಲಿರುವ ವ್ಯವಸಾಯ ಸಹಕಾರಿ ಸಂಘದ ಕಚೇರಿಗೆ ಸ್ಥಳಾಂತರಿಸಿ ರೈತರನ್ನು ಸರದಿಯಲ್ಲಿ ನಿಲ್ಲಿಸಿ ಗೊಬ್ಬರ ವಿತರಿಸಲು ಅನುವು ಮಾಡಿಕೊಟ್ಟರು.

ವಾರದಿಂದ ಉತ್ತಮ ಮಳೆಯಾಗಿದೆ. ಬೆಳೆದು ನಿಂತ ಫಸಲಿಗೆ ಮೇಲುಗೊಬ್ಬರವಾಗಿ ಯೂರಿಯಾ ಬಳಸುವುದು ಸಾಮಾನ್ಯ. ಹೀಗಾಗಿ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಗೊಬ್ಬರಕ್ಕಾಗಿ ಮುಗಿಬಿದ್ದಿದ್ದಾರೆ. ಶರಣಪ್ಪ ರೈತ
ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡುವುದರಿಂದ ಬೆಳೆಗಳಿಗೆ ರೋಗ ಅಥವಾ ಕೀಟಬಾಧೆ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ರೈತರು ಮಿತವಾಗಿ ಗೊಬ್ಬರ ಬಳಸಬೇಕು. | ರವೀಂದ್ರಗೌಡ ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ