ಮಂಜುನಾಥ ಎಸ್.ಸಿ. ಹೊಸಕೋಟೆ
ಪಟ್ಟಣದಲ್ಲಿ 7 ವರ್ಷಗಳಿಂದ ನಡೆಯುತ್ತಿರುವ 40.7 ಕೋಟಿ ರೂ. ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜನರ ತೆರಿಗೆ ಹಣ ಚರಂಡಿ ಪಾಲಾಗುತ್ತಿದೆ.
ಪ್ರಸ್ತುತ ಶೇ.60 ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಗಾಗಿ ಸರ್ಕಾರ ಕಾಲಕಾಲಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿದೆ. ಆದರೂ ಕಾಮಗಾರಿಯ ಶೇ.40 ಭಾಗ ಬಾಕಿ ಉಳಿದಿದೆ. ಇದರಿಂದಾಗಿ ಕಾಮಗಾರಿಯ ಅಂದಾಜು ವೆಚ್ಚ ಹೆಚ್ಚಾಗುತ್ತಲೇ ಇದೆ.
ಪಟ್ಟಣದ ಸುತ್ತ 104 ಕಿ.ಮೀ. ಉದ್ದದ ಒಳಚರಂಡಿ ನಿರ್ಮಿಸುವ ಜತೆಗೆ ಎರಡು ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಿತ್ತು. ಆದರೆ, ಅನಗತ್ಯ ವಿಳಂಬದಿಂದಾಗಿ ಕಾಮಗಾರಿ ವೆಚ್ಚ ಹೆಚ್ಚಾಗುತ್ತಲೇ ಹೋಯಿತು. ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಣ ಬಿಡುಗಡೆ ಆಗದೆ ಕಾಮಗಾರಿ ಸ್ಥಗಿತಗೊಳ್ಳುವಂತೆ ಆಗಿದೆ.
ಮ್ಯಾನ್‌ಹೋಲ್‌ಗಳಲ್ಲಿ ಮಣ್ಣು: ಒಳಚರಂಡಿ ನಿರ್ಮಾಣದ ಭಾಗವಾಗಿ ನಗರದ ಸುತ್ತ 3,600 ಮ್ಯಾನ್‌ಹೋಲ್ ನಿರ್ಮಿಸಲಾಗಿದೆ. ಆದರೆ ಹೊಸದಾಗಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರಿಂದ, ಬಹುತೇಕ ಮಣ್ಣುತುಂಬಿಕೊಂಡಿದೆ. ಚಿಕ್ಕ ಅಮಾನಿ ಕೆರೆಯಲ್ಲಿ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪೆತ್ತನಹಳ್ಳಿ ಬಳಿಯ ಸಂಸ್ಕರಣಾ ಘಟಕದ ನಿರ್ಮಾಣ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.
ಮಲಗುಂಡಿಗಳು ಕಟ್ಟಿಕೊಂಡು ಸಮಸ್ಯೆ: ನಗರದ ಕೆ.ಆರ್. ರಸ್ತೆಯಲ್ಲಿನ ಮಲಗುಂಡಿಗಳು (ಮ್ಯಾನ್‌ಹೋಲ್) ಕಟ್ಟಿಕೊಂಡು, ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ, ತ್ಯಾಜ್ಯ ನೀರು ಸಿಡಿದು ದಾರಿಹೋಕರು ಮುಜುಗರ ಅನುಭವಿಸುವುದು ಸಾಮಾನ್ಯವಾಗಿದೆ.
ಅಧಿಕ ಭಾರದ ವಾಹನ ಸಂಚಾರ: 18ರಿಂದ 20 ಟನ್ ಸಾಮರ್ಥ್ಯದ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ಕೆ.ಆರ್. ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ಈ ರಸ್ತೆಯಲ್ಲಿ ಈಗ ಪ್ರತಿನಿತ್ಯ 40ರಿಂದ 60 ಟನ್ ಸಾಮರ್ಥ್ಯದ ಭಾರಿ ವಾಹನಗಳು ಸಂಚರಿಸುತ್ತಿವೆ. ಇದು ಮಲಗುಂಡಿಗಳು ಬಾಯ್ದೆರೆಯಲು ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೆದ್ದಾರಿಯಲ್ಲಿ ಹೋದರೆ ಬಳಸಿಕೊಂಡು ಹೋದಂತೆ ಆಗುತ್ತದೆ ಎಂಬ ಕಾರಣಕ್ಕಾಗಿ ಭಾರಿ ವಾಹನಗಳು ಕೆ.ಆರ್. ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನದಟ್ಟಣೆ ಉಂಟಾಗುತ್ತಿದೆ ಎಂದು ದೂರಿದ್ದಾರೆ.
ಅಧಿಕಾರಿಗಳ ಪೇಚಾಟ: ಒಳಚರಂಡಿ ನಿರ್ಮಾಣ ಕಾಮಗಾರಿ ಅರೆಬರೆಯಾಗಿರುವುದರಿಂದ, ಕಾಮಗಾರಿಯನ್ನು ಬೇಗನೆ ಮುಗಿಸುವಂತೆ ಸಾರ್ವಜನಿಕರು ಒಂದೆಡೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಹಣ ಬಿಡುಗಡೆ ಮಾಡದಿದ್ದರೆ, ಒಳಚರಂಡಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಗುತ್ತಿಗೆದಾರ ಬೆದರಿಕೆ ಹಾಕುತ್ತಿದ್ದಾರೆ. ಇವರಿಬ್ಬರ ನಡುವೆ ಸಿಲುಕಿಕೊಂಡ ಅಧಿಕಾರಿಗಳ ಪೇಚಾಟ ಹೇಳತೀರದಾಗಿದೆ. ಪರಾಮರ್ಶಿತ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ. ಈ ಬಗ್ಗೆ ಗಮನಹರಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೆ, ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಧಿಕಾರಿಗಳು ಅಲವತ್ತುಕೊಂಡಿದ್ದಾರೆ.
ಒಳಚರಂಡಿ ನಿರ್ಮಾಣ ಕಾಮಗಾರಿ ವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಮಲಗುಂಡಿಗಳು ಬಾಯ್ದೆರೆಯಲು ಕಳಪೆ ಕಾಮಗಾರಿ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಜಿಲ್ಲಾಧಿಕಾರಿ ಅವರೇ ಸ್ವತಃ ಇದನ್ನು ಪರಿಶೀಲಿಸಿದ್ದಾರೆ. ಭಾರಿ ವಾಹನ ಸಂಚಾರದಿಂದ ಮಲಗುಂಡಿಗಳು ಬಾಯ್ದೆರೆಯುತ್ತಿವೆ ಎಂಬುದು ಗಮನಕ್ಕೆ ಬಂದಿದೆ. ಸರ್ಕಾರದಿಂದ ಹಣ ಬರುತ್ತಲೇ ಕಾಮಗಾರಿ ಪೂರ್ಣಗೊಳ್ಳುತ್ತದೆ. ಗಾಯತ್ರಿ, ಕೊಳಚೆ ನಿರ್ಮೂಲನೆ ಹಾಗೂ ಒಳಚರಂಡಿ ಇಲಾಖೆ ಇಂಜಿನಿಯರ್