ಹುಬ್ಬಳ್ಳಿ: ಇದೀಗ ಒಣಮೆಣಸಿನಕಾಯಿ ಸೀಸನ್ ಆರಂಭವಾಗಿದ್ದು, ಮಾರಾಟಕ್ಕೆ ತರುವಾಗ ರೈತರು ಕೇವಲ 40 ಕೆಜಿ ತೂಕದ ಚೀಲಗಳನ್ನು ಬಳಸಬೇಕೆಂದು ಇಲ್ಲಿಯ ಎಪಿಎಂಸಿ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, 40 ಕೆಜಿ ಮೆಣಸಿನಕಾಯಿ ಚೀಲಗಳನ್ನು ತರುವುದರಿಂದ ಬಾರದಾನ (ಚೀಲದ ವಜಾ) ಕೇವಲ 1.5 ಕೆಜಿಯಾಗುತ್ತದೆ. ಅದಕ್ಕಿಂತ ಹೆಚ್ಚಿನ ಅಂದರೆ 50 ಕೆಜಿವರೆಗಿನ ಚೀಲಗಳಿಗೆ 2.5 ಕೆಜಿ ವಜಾ ತೆಗೆಯಲಾಗುತ್ತದೆ. 50 ಕೆಜಿಗಿಂತ ಹೆಚ್ಚು ಭಾರದ ಚೀಲಗಳನ್ನು ಯಾರೂ ತೂಕ ಮಾಡಬಾರದು, ಖರೀದಿದಾರರು ಕೊಂಡುಕೊಳ್ಳಬಾರದು ಎಂಬ ಆದೇಶವೇ ಇದೆ. ಇದನ್ನು ಗಮನಿಸಿ ರೈತರು ಫಸಲು ತರಬೇಕು ಎಂದು ಕೋರಿದರು.
ಹೆಚ್ಚು ಮೆಣಸಿನಕಾಯಿ ಇದ್ದವರು 40 ಕೆಜಿ ತೂಕದ ಚೀಲಗಳನ್ನು ಮಾಡುವುದು ಉತ್ತಮ. ಅದರಿಂದ ಉತ್ತಮ ದರ ಸಿಗುವುದಲ್ಲದೆ ಸಾಗಾಟ, ತೂಕ ಮಾಡಲು ಎಲ್ಲದಕ್ಕೂ ಅನುಕೂಲ. ಚೀಲಗಳಿಗೆ ಹೆಚ್ಚು ವಜಾ (ಬಾರದಾನ) ಹೋಗುವುದು ತಪ್ಪಲಿದೆ. ಅಲ್ಲದೆ ಹೆಚ್ಚು ನೀರು ಹೊಡೆಯಬಾರದು. ಅಗತ್ಯ ಇರುವಷ್ಟು ಮಾತ್ರ ಹೊಡೆದರೆ ಉತ್ತಮ ಧಾರಣೆಯೂ ಸಿಗಲಿದೆ ಎಂದರು.
ಅಕ್ಕಪಕ್ಕದ ರಾಜ್ಯಗಳಿಂದಲೂ ಇಲ್ಲಿಗೆ ಖರೀದಿದಾರರು ಬರುತ್ತಾರೆ. ಇಲ್ಲಿನ ಮೆಣಸಿನಕಾಯಿಗೆ ಹೊರದೇಶದಲ್ಲೂ ಬೇಡಿಕೆ ಇದೆ. ಹಾಗಾಗಿ ರೈತರು ಎಪಿಎಂಸಿ ಹಾಗೂ ವರ್ತಕರ ಮನವಿಗಳನ್ನು ಪರಿಗಣಿಸಿ ಗುಣಮಟ್ಟದ ಮೆಣಸಿನಕಾಯಿ ಹಾಗೂ ನಿಗದಿತ ತೂಕದಲ್ಲಿ ಫಸಲು ತರಬೇಕು ಎಂದು ಕೋರಿದರು.
ಹುಬ್ಬಳ್ಳಿ ವರ್ತಕರ ಮೇಲೆ ವಿಶ್ವಾಸವಿಟ್ಟು ರೈತರು ಹೆಚ್ಚಿನ ಪ್ರಮಾಣದಲ್ಲಿ ಫಸಲು ತರುತ್ತಿದ್ದಾರೆ. ಅದರಂತೆ ಇಲ್ಲಿ ಉತ್ತಮ ಬೆಲೆಯೂ ಸಿಗುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಪ್ರಕಾರ ಎಲ್ಲೆಂದರಲ್ಲಿ ವ್ಯಾಪಾರ ಮಾಡಬಹುದು. ಆದರೆ, ಎಪಿಎಂಸಿಯಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಒಳ್ಳೆಯ ವೇದಿಕೆ ಇದೆ. ಸ್ಪರ್ಧಾತ್ಮಕ ದರ ಸಿಗುತ್ತದೆ. ಇದನ್ನು ಬೆಳೆಗಾರರು ಪರಿಗಣಿಸುತ್ತಿರುವುದರಿಂದ ದಿನೇದಿನೆ ಆವಕ ಹೆಚ್ಚಾಗುತ್ತಿದೆ ಎಂದು ಯಕಲಾಸಪುರ ಹೇಳಿದರು.
ಸ್ವಚ್ಛತೆ ಇಲ್ಲ:
ಏಷ್ಯಾ ಖಂಡದಲ್ಲೇ ದೊಡ್ಡದು ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿ ಎಪಿಎಂಸಿಯಲ್ಲಿ ಸ್ವಚ್ಛತೆಯದ್ದೇ ಸಮಸ್ಯೆ. ಮಹಾನಗರ ಪಾಲಿಕೆಗೆ ಇನ್ನೂ ಹಸ್ತಾಂತರವಾಗಿಲ್ಲ. ಹಾಗಾಗಿ ಎಪಿಎಂಸಿ ಆಡಳಿತ ವ್ಯವಸ್ಥೆಯೇ ಕಸ ವಿಲೇವಾರಿ ನೋಡಿಕೊಳ್ಳುತ್ತಿದೆ. ಇಲ್ಲಿ ಸರಿಯಾಗಿ ಕಸ ವಿಲೇವಾರಿ ಆಗುವುದಿಲ್ಲ. ಇದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುತ್ತದೆ ಎಂದು ವರ್ತಕರು ಅಲವತ್ತುಕೊಂಡರು.
ಪ್ರತಿಯೊಂದು ಮಳಿಗೆಯಿಂದ ನಿತ್ಯ ಕಸ ಸಂಗ್ರಹಣೆ ಆಗಬೇಕು. ಆದರೆ, ಹಾಗಾಗುತ್ತಿಲ್ಲ. ವಾರ ಇಲ್ಲವೆ ತಿಂಗಳಿಗೊಮ್ಮೆ ಕಸ ಸಂಗ್ರಹ ಮಾಡುತ್ತಾರೆ. ಈ ಬಗ್ಗೆ ಎಪಿಎಂಸಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬಸವರಾಜ ಯಕಲಾಪುರ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ ಹೇಳಿದರು.
ಹಿರಿಯ ವರ್ತಕರಾದ ಮೋಹನ ಸೋಳಂಕಿ, ರಾಜಣ್ಣ ಬತ್ಲಿ, ಗೋಷ್ಠಿಯಲ್ಲಿದ್ದರು.
ಸೇವಾ ಶುಲ್ಕ ರದ್ದುಪಡಿಸಿ
ಫಸಲು ಖರೀದಿಯಾದ ಕೂಡಲೆ ರೈತರಿಗೆ ಹಣ ಸಂದಾಯ ಮಾಡಲು ಹೋದರೆ ಬ್ಯಾಂಕ್ ಸೇವಾ ಶುಲ್ಕ ಭರಿಸುವುದು ಅನಿವಾರ್ಯವಾಗುತ್ತಿದೆ. ಹಾಗಾಗಿ ದೊಡ್ಡ ಮೊತ್ತ ಇರುವ ರೈತರು ಕಡ್ಡಾಯವಾಗಿ ಬ್ಯಾಂಕ್ ಪಾಸ್ಬುಕ್, ಆಧಾರ್ಕಾರ್ಡ್ ತರಲು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಮೆಣಸಿನಕಾಯಿ, ಶೇಂಗಾ, ಹೆಸರು, ಗೋವಿನಜೋಳ, ಹತ್ತಿ ಸೇರಿ ಬಹುತೇಕ ಒಣ ಫಸಲು ಆನ್ಲೈನ್ ಟ್ರೇಡಿಂಗ್ ನಡೆಯುತ್ತಿದೆ. ಆದರೆ, ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಬಹಳಷ್ಟು ಕೆಲಸಗಳು ವಿಳಂಬವಾಗುತ್ತಿವೆ. ಸಮರ್ಪಕ ಸಿಬ್ಬಂದಿ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಬೇಕೆಂದು ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಕೋರಿದರು.