ಕಲಬುರಗಿ: ರಾಜ್ಯ ಗುತ್ತಿಗೆದಾರರ ಸಂಘದಿಂದ ಹಿಂದೆ ರಾಜ್ಯದಲ್ಲಿ ಶೇ.೪೦ ಕಮಿಷನ್ ಆರೋಪ ಸತ್ಯವಾಗಿದೆ. ಆ ಬಗ್ಗೆ ಸೂಕ್ತ ದಾಖಲೆ ಇದ್ದು, ಅದನ್ನು ನ್ಯಾ.ನಾಗಮೋಹನದಾಸ್ ಆಯೋಗಕ್ಕೆ ಸಲ್ಲಿಸಲಾಗಿದೆ. ಆದರೆ ಲೋಕಾಯುಕ್ತರು ಶೇ.೪೦ ಕಮಿಷನ್ ಸಾಬೀತಿಗೆ ಸೂಕ್ತ ದಾಖಲೆ ಇಲ್ಲ ಎಂಬ ವರದಿ ನೀಡಿದ್ದಾರೆ ಎನ್ನುತ್ತಿರುವುದು ನಮ್ಮ ಸಂಘದ ಆರೋಪಕ್ಕೆ ಸಂಬಂಧಿಸಿದ್ದಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರ ಅಧ್ಯಕ್ಷ ಜಗನ್ನಾಥ ಶೇಗಜಿ ಸ್ಪಷ್ಟಪಡಿಸಿದರು.
ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ದಿವಗಂತ ಅಂಬಿಕಾಪತಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆ ತನಿಖೆ ನಡೆದು, ಲೋಕಾಯುಕ್ತ ವರದಿ ನೀಡಿದೆ. ಆದರೆ ಅದಕ್ಕೆ ನಮ್ಮ ಸಂಘ ಮಾಡಿರುವ ಶೇ.೪೦ ದೂರಿಗೆ ಸಂಬಂಧವಿಲ್ಲ. ಆದರೆ ಸಂಘದ ಸ್ಪಷ್ಟತೆ ಇಲ್ಲದೆ ಪ್ರತಿಪಕ್ಷ ನಾಯಕ ಆರ್.ಅಶೋಕ, ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ ಅವರು ಕೆಂಪಣ್ಣ ಸೇರಿ ನಮ್ಮ ಸಂಘದ ಆರೋಪದ ಬಗ್ಗೆ ಹಗುರವಾಗಿ ಮಾತನಾಡಿದ್ದು ನೋವು ತಂದಿದೆ. ನಮ್ಮ ಆರೋಪ ಸತ್ಯವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪದ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ ಆಯೋಗವನ್ನು ಸಿಎಂ ನೇಮಿಸಿದ್ದು, ಅದರ ತನಿಖೆ ನಡೆದಿದೆ. ನ.೨೦ರಂದು ವಿಚಾರಣೆಗೆ ಕರೆದಿದ್ದು, ಭೇಟಿ ನೀಡಿ, ೩೦ ಜಿಲ್ಲೆಗಳಿಂದ ಎರಡು ಸಾವಿರ ಪುಟಗಳ ದಾಖಲೆ ಸಂಗ್ರಹಿಸಿದ್ದು, ಅದನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಾಲ್ಕು ಅಂಶಗಳಲ್ಲಿ ಶೇ.೪೦ ಕಮೀಷನ್: ಒಂದು ಟೆಂಡರ್ ಕರೆದು ಏಳೆಂಟು ಗುತ್ತಿಗೆದಾರರು ಭಾಗವಹಿಸಿದ್ದರೂ, ಎಲ್-೧ ಇದ್ದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಬೇಕು. ಆದರೆ ಕಡಿಮೆ ದರ ನಮೂದಿಸಿದ ಗುತ್ತಿಗೆದಾರನ ಟೆಂಡರ್ ತಿರಸ್ಕರಿಸಿ, ಹೆಚ್ಚಿನ ದರದವರಿಗೆ ಅವಕಾಶ ನೀಡಲಾಗುತ್ತದೆ. ಪೂಜೆ ನೆಪದಲ್ಲಿ ವಿಳಂಬ ಮಾಡುವುದು, ಬಿಲ್ ನೀಡುವಲ್ಲಿ ವಿಳಂಬ, ಜೇಷ್ಠತೆ ಆಧಾರದ ಮೇಲೆ ಬಿಲ್ ಪಾವತಿಸದಿರುವುದು ಶೇ.೪೦ ಕಮೀಷನ್ ಒಳಗೊಂಡಿದೆ. ಈ ಅಂಶಗಳ ಆಧಾರದಲ್ಲಿ ನ್ಯಾ.ಮೋಹನದಾಸ್ ಆಯೋಗ ತನಿಖೆ ನಡೆಯುತ್ತಿದೆ ಎಂದು ಹೇಳಿದರು.