ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಕರೊನಾ ಅಬ್ಬರದಿಂದಾಗಿ ಆಕ್ಸಿಜನ್ಗೆ ದೇಶದೆಲ್ಲೆಡೆ ಹಾಹಾಕಾರ ಉಂಟಾಗುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಮಟ್ಟಿಗೆ ಕೊಂಚ ನಿರಾಳ ತರುವಂಥ ಸುದ್ದಿ ಇಲ್ಲಿದೆ.
ಅಂದಾಜು 34 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದರಂತೆ ಪಿಎಸ್ಎ ಮಾದರಿ 40 ಆಕ್ಸಿಜನ್ ಉತ್ಪಾದನಾ ಘಟಕಗಳ ಆರಂಭಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಸಿರು ನಿಶಾನೆ ತೋರಿಸಿದೆ.
390 ಎಲ್ಪಿಎಂ (ಲೀಟರ್ ಪರ್ ಮಿನಿಟ್ ಉತ್ಪಾದನಾ) ಸಾಮರ್ಥ್ಯದ 30 ಘಟಕಗಳು ಹಾಗೂ 500 ಎಲ್ಪಿಎಂನ 30 ಘಟಕಗಳನ್ನು ಸ್ಥಾಪಿಸುವಂತೆ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಆದೇಶಿಸಿದೆ. 390 ಎಲ್ಪಿಎಂ ಸಾಮರ್ಥ್ಯದ 30 ಘಟಕಗಳ ಪೈಕಿ 11ನ್ನು ಮೇ 15 ಹಾಗೂ ಇನ್ನುಳಿದ ಎಲ್ಲ ಘಟಕಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕೆಂದು ತಾತ್ಕಾಲಿಕ ಗಡುವು ವಿಧಿಸಿದೆ. ಆದರೆ ಮೂಲಗಳ ಪ್ರಕಾರ ಪ್ರೊಡಕ್ಷನ್ ಪ್ಲಾಂಟ್ ಸಿದ್ಧವಾಗುತ್ತಿರುವುದು ತಿಂಗಳಿಗೆ ಕನಿಷ್ಠವೆಂದರೆ ನಾಲ್ಕೈದು. ಮೇ 5 ರಂದು ಆದೇಶ ಹೊರ ಬಿದ್ದಿದೆ.
ತಕ್ಷಣಕ್ಕೆ ಈ ಪ್ರಮಾಣದಲ್ಲಿ ಪ್ಲಾಂಟ್ಗಳನ್ನು ಪೂರೈಸಲು ಪೂರೈಕೆದಾರರಿಗೆ ಸಾಧ್ಯವಾಗದೇ ಹೋಗಬಹುದು. ಆದರೂ ಈ ಎಲ್ಲ ಘಟಕಗಳ ನಿರ್ಮಾಣ ಕಾಮಗಾರಿ ಜೂನ್ 30 ರೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳುತ್ತಿವೆ. ತಲಾ ಒಂದು ಘಟಕ ಸ್ಥಾಪನೆಗೆ ಪ್ಲಾಂಟ್, ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿ ಸಹಿತ ಅಂದಾಜು 82 ಲಕ್ಷ ರೂ. ಅಧಿಕ ವೆಚ್ಚವನ್ನು ನಿರೀಕ್ಷಿಸಲಾಗಿದೆ.
ಉದ್ದೇಶಿತ ಪಿಎಸ್ಎ ಟೈಪ್ ಆಫ್ ಪ್ಲಾಂಟ್ಗಳನ್ನು ರಾಜ್ಯದ ಹಲವು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ಲಾಂಟ್ನಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ನನ್ನು ಕನಿಷ್ಠವೆಂದರೂ ನೂರು ರೋಗಿಗಳಿಗೆ ನೇರ ಪೂರೈಸಲು ಸಾಧ್ಯವಾಗಲಿದೆ. ಈ ಘಟಕ ವಾತಾವರಣದಲ್ಲಿರುವ ಗಾಳಿ ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಉತ್ಪಾದಿಸುತ್ತದೆ.
| ಎಸ್.ರಮೇಶ್ ಎಇಇ ಇಂಜಿನಿಯರ್ ಆ ಮತ್ತು ಕು.ಇಲಾಖೆ ಇಂಜಿನಿಯರಿಂಗ್ ವಿಭಾಗ ತುಮಕೂರು
ಜಿಲ್ಲಾಧಿಕಾರಿ ಪತ್ರ
ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಈಗಿರುವ 6 ಕೆಎಲ್ ಸಾಮರ್ಥ್ಯದ ಮತ್ತೊಂದು ಆಕ್ಸಿಜನ್ ಸ್ಟಾಕ್ ಯೂನಿಟ್ ಸ್ಥಾಪನೆಗೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಇನ್ನು ಹೆಚ್ಚುವರಿಯಾಗಿ 230 ಆಕ್ಸಿನೇಟೆಡ್ ಬೆಡ್ಗಳನ್ನು ಸ್ಥಾಪಿಸುವ ಕಾಮಗಾರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆಡಳಿತಾತ್ಮಕ ಅನುಮೋದನೆ ನೀಡಿ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.