ಬೆಂಗಳೂರು: ತೆಲಂಗಾಣದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ಗದಗ ಜಿಲ್ಲೆಗೆ 40 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮೂಲತಃ ಗದಗ ಜಿಲ್ಲೆಯವರಾದ್ದರಿಂದ ಅವರು ಈ ಮೂಲಕ ತಮ್ಮ ಜಿಲ್ಲೆಗೆ ನೆರವಾಗಿದ್ದಾರೆ.
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು ವಿವಿಧ ವೈದ್ಯಕೀಯ ಸೌಲಭ್ಯಗಳು ಸೇರಿ ಒಟ್ಟು 40 ಲಕ್ಷ ರೂ. ಮೌಲ್ಯದ ನೆರವನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದರಲ್ಲಿ 22 ಆಕ್ಸಿಜನ್ ಕಾನ್ಸಂಟ್ರೇಟರ್, 84 ಆಕ್ಸಿಜನ್ ಸಿಲಿಂಡರ್, 2000 ಕೋವಿಡ್ ಕಿಟ್, 20 ಸಾವಿರ ಮಾಸ್ಕ್, 200 ಲೀಟರ್ ಸ್ಯಾನಿಟೈಸರ್, 1000 ಫೇಸ್‌ಶೀಲ್ಡ್, 24 ಯುನಿಟ್ ರೆಮ್ಡೆಸಿವಿರ್ ಜತೆಗೆ ಇನ್ನಿತರ ಔಷಧ ಸಾಮಗ್ರಿಗಳೂ ಸೇರಿವೆ.
ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ್ ಅವರ ಸಹೋದರ ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ಡಾ.ಎಂ.ಸಿ.ಸಜ್ಜನರ್ ಅವರು ಶುಕ್ರವಾರ ಜಿಲ್ಲಾಡಳಿತದ ಭವನದ ಆವರಣದಲ್ಲಿ ಈ ವೈದ್ಯಕೀಯ ಸೌಲಭ್ಯ ಹಾಗೂ ಔಷಧ ಸಾಮಗ್ರಿಗಳನ್ನು ಹಸ್ತಾಂತರಿಸಿದರು.