ಜಿಲ್ಲೆ

ಕುರ್ಕಿ ಬಳಿ ಭದ್ರಾ ಮುಖ್ಯನಾಲೆ ಸೇತುವೆ ಕುಸಿತ

Davangere - Desk - Ganesh M K

ಮಾಯಕೊಂಡ: ದಾವಣಗೆರೆ ತಾಲೂಕಿನ ಕುರ್ಕಿ ಸಮೀಪ ಹಾದು ಹೋಗಿರುವ ಭದ್ರಾ ವಿಭಾಗದ 63ರ ಹರಪನಹಳ್ಳಿ ಸೇರುವ ನಾಲೆಯ ಸೇತುವೆ ಮಂಗಳವಾರ ಬೆಳಗ್ಗೆ ಕುಸಿದಿದೆ.

ಡಿವಿಜನ್ 63 ಮುಖ್ಯನಾಲೆಯಾಗಿದ್ದು ಕುರ್ಕಿ ಸಮೀಪದಿಂದ ಎರಡು ಭಾಗವಾಗಿ ಒಂದು ದಾವಣಗೆರೆ ಶಿರಮಗೊಂಡನಹಳ್ಳಿ, ಟಿವಿ ಸ್ಟೇಷನ್ ಕೆರೆ ಕಡೆ ಹರಿದರೆ, ಮತ್ತೊಂದು ಎಚ್. ಕಲಪನಹಳ್ಳಿ, ಹೊನ್ನೂರು ಮೂಲಕ ಹಿರೇಮೇಗಳಗೆರೆ ಮಾರ್ಗವಾಗಿ ಹರಪನಹಳ್ಳಿ ಸೇರುತ್ತದೆ.

ಹರಪನಹಳ್ಳಿ ಸೇರುವ ನಾಲೆಯೇ ಕುಸಿದಿದೆ. ವಿಷಯ ತಿಳಿದ ತಕ್ಷಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಹಾಗೂ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ನಾಲೆಯ ಸೇತುವೆ ಕುಸಿದಿದ್ದು ಭಾರಿ ಅವಘಡ ತಪ್ಪಿದೆ. ನಾಲೆಯ ಕೆಲ ಸೇತುವೆಗಳು 60, 70 ವರ್ಷ ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿವೆ. ಪುನರ್ ನಿರ್ಮಾಣಕ್ಕೆ ತಕ್ಷಣ 3.5 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಕಂದಗಲ್ಲು ಕಬ್ಬೂರು ಗ್ರಾಮಗಳ ಬಳಿ ಕೂಡ ಸೇತುವೆಗಳು ಶಿಥಿಲಾವಸ್ಥೆ ತಲುಪಿವೆ. ನಾಲೆ ದುರಸ್ತಿ, ಸೇತುವೆಗಳ ಪುನರ್ ನಿರ್ಮಾಣ, ತಡೆಗೋಡೆಗಳನ್ನು ಕಟ್ಟಲು ಒಟ್ಟು 40 ಕೋಟಿ ರೂ. ಮಂಜೂರು ಮಾಡುವಂತೆ ಈಗಾಗಲೇ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಮಾತನಾಡಿ, ಡಿವಿಜನ್ 63 ನಾಲೆ ಸೇತುವೆ ಕುಸಿದಿದ್ದು ನಾಲೆಯ ನೀರಿನ ಪ್ರಮಾಣ ಕಡಿಮೆ ಮಾಡಿ ಸ್ವಲ್ಪ ನೀರನ್ನು ಸೂಳೆಕೆರೆಗೆ ಹರಿಸಲಾಗಿದೆ ಎಂದರು.

ನಾಲೆ ಸುತ್ತಮುತ್ತಲ ರೈತರಿಗೆ ಆತಂಕ ಬೇಡ. ಜಮೀನುಗಳಿಗೆ ನೀರು ನುಗ್ಗುವುದಿಲ್ಲ ಅಚ್ಚು ಕಟ್ಟು ರೈತರಿಗೆ ಸಮರ್ಪಕ ನೀರು ಲಭಿಸಲಿದೆ. ಅನುದಾನ ಮಂಜೂರಾಗುತ್ತಿದ್ದಂತೆ ಪುನರ್ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರಾದ ನಂದ್ಯಪ್ಪ, ವೀರೇಂದ್ರಾಚಾರ್ಯ ಶಿವಕುಮಾರ್, ಮರುಳಸಿದ್ದೇಶ್, ಹಾಲೇಶ್, ರಾಮಗೊಂಡನಹಳ್ಳಿ ಮಲ್ಲಿಕಾರ್ಜುನ್ ಇತರರು ಇದ್ದರು.