ಜಿಲ್ಲೆ

4 ತಿಂಗಳ ಹಸುಳೆ, ಶತಾಯುಷಿಗೂ ಸೋಂಕು

ಕಾರವಾರ: ಜಿಲ್ಲೆಯ ಒಟ್ಟು ಮತ್ತೆ 88 ಜನರಿಗೆ ಕರೊನಾ ಇರುವುದು ಶುಕ್ರವಾರ ಖಚಿತವಾಗಿದೆ. ಇವರಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರೇ ಹೆಚ್ಚಿದ್ದಾರೆ. ಇಂತಹವರ ಸಂಖ್ಯೆ 63. ಅಲ್ಲದೆ, ಸೋಂಕಿತರಲ್ಲಿ ನಾಲ್ವರು ವೃದ್ಧರಿದ್ದಾರೆ.

ಹೊರ ಊರಿನಿಂದ ಬಂದ 6 ಜನರಿಗೆ, ಜ್ವರ ಇದ್ದ 7 ಜನರಿಗೆ ಸೋಂಕು ಖಚಿತವಾಗಿದೆ. 11 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಕುಮಟಾದಲ್ಲಿ 30, ಹೊನ್ನಾವರದಲ್ಲಿ 4, ಭಟ್ಕಳದಲ್ಲಿ 3, ಶಿರಸಿಯಲ್ಲಿ 23, ಅಂಕೋಲಾದಲ್ಲಿ 1, ಸಿದ್ದಾಪುರದಲ್ಲಿ 4, ಮುಂಡಗೋಡಿನಲ್ಲಿ 7, ಹಳಿಯಾಳದಲ್ಲಿ 14, ಜೊಯಿಡಾದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.

ಕಾರವಾರ ಕ್ರಿಮ್ಸ್​ನಲ್ಲಿ ಒಟ್ಟು 6 ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮುಂಡಗೋಡಿನ ಒಬ್ಬನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ.

ಕುಮಟಾದ ಹೆಗಡೆ ಕ್ರಾಸ್​ನ ಹೋಟೆಲ್ 15 ಸಿಬ್ಬಂದಿಗೆ ಕರೊನಾ ಖಚಿತವಾಗಿದೆ. ಇದರಿಂದ ಹೋಟೆಲ್ ಸೀಲ್​ಡೌನ್ ಮಾಡಲಾಗಿದೆ. ಕರಾವಳಿ ಕಾವಲುಪಡೆಯ ಮೂವರು ಕಾನ್ಸ್​ಟೇಬಲ್​ಗಳಿಗೆ, ಮೂರುಕಟ್ಟೆ ಸಮೀಪದ ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ, ಲಡಾಖ್​ನಿಂದ ಆಗಮಿಸಿದ ವಕ್ಕನಳ್ಳಿಯ ನಾಲ್ವರಿಗೆ, ಮೂರು, ದಾರೇಶ್ವರ, ಶಶಿಹಿತ್ತಲು ಗ್ರಾಮದವರಿಗೆ ಸೋಂಕು ಖಚಿತವಾಗಿದೆ. ಗೋಕರ್ಣದ ಅರ್ಚಕರೊಬ್ಬರಿಗೆ ಕರೊನಾ ಖಚಿತವಾಗಿದ್ದು, ಅವರ ಸಂಪರ್ಕಕ್ಕೆ ಬಂದ 200ಕ್ಕೂ ಅಧಿಕ ಜನರನ್ನು ಗುರುತಿಸಲಾಗಿದೆ.

4 ತಿಂಗಳ ಮಗುವಿಗೆ: ಶಿರಸಿ ನವಣಗೇರಿಯಲ್ಲಿ 4 ತಿಂಗಳ ಮಗುವಿಗೂ ಸೋಂಕು ತಗುಲಿದೆ. ಅರಣ್ಯ ವಿದ್ಯಾಲಯದ ಒಬ್ಬರಿಗೆ, ರಾಜೀವ ನಗರ, ಗಾಂಧಿ ನಗರ, ಬೀಳೂರು, ಕೊರ್ಲಕಟ್ಟಾ, ಸಾಲ್ಕಣಿ, ಕಸ್ತೂರಬಾ ನಗರ, ದಾಸನಕೊಪ್ಪ ಹಾಗೂ ಬಿಸಲಕೊಪ್ಪಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕರೊನಾ ಇರುವುದು ಖಚಿತವಾಗಿದೆ.

100ರ ವೃದ್ಧೆಗೂ ಸೋಂಕು: ದಾಂಡೇಲಿ ಮಾರುತಿ ನಗರದ 100 ವರ್ಷದ ಅಜ್ಜಿಗೂ ಸೋಂಕು ತಗುಲಿದೆ. ಟೌನ್​ಶಿಪ್​ನ ಮೂವರಿಗೆ, ಲಿಂಕ್ ರಸ್ತೆಯ ಇಬ್ಬರಿಗೆ, ಗಾಂಧಿ ನಗರದ ಇಬ್ಬರಿಗೆ, ಸುದರ್ಶನ ನಗರ, ವೆಸ್ಟ್ ಕೋಸ್ಟ್ ಕಾರ್ಖಾನೆ, ಮಾರುತಿನಗರ, ಬೈಲ್​ಪಾರ್ ನಿವಾಸಿಗಳಿಗೆ ಸೋಂಕು ಖಚಿತವಾಗಿದೆ.

53 ಮಂದಿ ಗುಣಮುಖ: ಕಾರವಾರದಲ್ಲಿ 4, ಅಂಕೋಲಾದಲ್ಲಿ 15, ಕುಮಟಾದಲ್ಲಿ 12, ಹೊನ್ನಾವರದಲ್ಲಿ 5, ಶಿರಸಿ ಮತ್ತು ಸಿದ್ದಾಪುರದಲ್ಲಿ ತಲಾ ಒಬ್ಬ ಹಾಗೂ ಹಳಿಯಾಳದಲ್ಲಿ 15 ಜನರು ಬಿಡುಗಡೆ ಹೊಂದಿದ್ದಾರೆ.</