ಮಂಗಳೂರು: ಅಂಚೆ ಕಚೇರಿಯಲ್ಲಿ ಗ್ರಾಹಕರ ಉಳಿತಾಯದ ಹಣವನ್ನು ಸ್ವಂತಕ್ಕೆ ಬಳಸಿ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣ ನ್ಯಾಯಾಲಯದಲ್ಲಿ ಬಿಡುಗಡೆಗೊಂಡಿದ್ದಾತನಿಗೆ ಮೇಲ್ಮನವಿಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪುನೀಡಿದೆ.
ಬೆಳ್ತಂಗಡಿ ತಾಲೂಕು ಶಿರ್ತಾಡಿ ಗ್ರಾಮದ ಎಂ. ದಿನೇಶ್ (50) ಶಿಕ್ಷೆಗೊಳಗಾದಾತ.
ಬೆಳ್ತಂಗಡಿ ತಾಲೂಕು, ಪೆರಾಡಿ ಗ್ರಾಮದಲ್ಲಿರುವ ಶಿರ್ತಾಡಿ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. 2008ರ ಜ.1ರಿಂದ ಡಿ.31ರ ವರೆಗೆ ಅಂಚೆ ಕಚೇರಿಗೆ ಗ್ರಾಹಕರು ಉಳಿತಾಯ ಖಾತೆ ಹಾಗೂ ಆರ್ ಡಿ ಖಾತೆಗೆ ಜಮಾ ಮಾಡಲು ನೀಡಿದ ಹಣವನ್ನು ಗ್ರಾಹಕರ ಖಾತೆ ಪುಸ್ತಕದಲ್ಲಿ ಬರೆದು, ಅಂಚೆ ಇಲಾಖೆಗೆ ಜಮೆ ಮಾಡದೇ ಒಟ್ಟು 19,906 ರೂ. ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾನೆ. ಅಂಚೆ ಇಲಾಖೆಗೆ ಹಾಗೂ ಗ್ರಾಹಕರಿಗೆ ಸೇರಿದ ಹಣವನ್ನು ದುರುಪಯೋಗ ಪಡಿಸಿಕೊಂಡು ಇಲಾಖೆಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಬೆಳ್ತಂಗಡಿಯಲ್ಲಿ ವಿಚಾರಣೆ ನಡೆದು, ನ್ಯಾಯಾಲಯವು ಆತನ್ನು ಬಿಡುಗಡೆಗೊಳಿಸಿತ್ತು.
ಬಿಡುಗಡೆ ಆದೇಶದ ವಿರುದ್ಧ ಅಭಿಯೋಜನೆಯು ಮೇಲ್ಮನವಿ ಸಲ್ಲಿಸಿದ್ದು, ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಪ್ರತಿ-ವಾದವನ್ನು ಆಲಿಸಿದ ನ್ಯಾಯಾಧೀಶರು ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ವಿಚಾರಣ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಜು.16ರಂದು ತೀರ್ಪು ನೀಡಿದ್ದಾರೆ.
ಈತನಿಗೆ ಭಾ.ದಂ.ಸಂ ಕಲಂ 409 ರ ಅಪರಾಧಕ್ಕೆ 4 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ಮತ್ತು ಕಲಂ 420ರ ಅಪರಾಧಕ್ಕೆ 2 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.