ಜಿಲ್ಲೆ

4 ವರ್ಷದ ಇಂಟಿಗ್ರೇಟೆಡ್ ಪದವಿ ಶಿಕ್ಷಣ

kumarvrl

ಬೆಂಗಳೂರು: ರಾಜ್ಯದ ಆಯ್ದ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 4 ವರ್ಷಗಳ ಇಂಟಿಗ್ರೇಟೆಡ್ (ಏಕೀಕೃತ) ಪದವಿ ಕೋರ್ಸ್​ಗಳನ್ನು ಆರಂಭಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಕೆ. ಪ್ರಸಾದ್ ತಿಳಿಸಿದ್ದಾರೆ.

ವಿಜಯನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ‘ಪ್ರಗತಿ ಪಥ’ ಉದ್ಯೋಗ ಮೇಳದಲ್ಲಿ ಮಾತನಾಡಿದರು. ರಾಜ್ಯದಲ್ಲಿ 430 ಸರ್ಕಾರಿ ಕಾಲೇಜುಗಳು, 400 ಖಾಸಗಿ ಕಾಲೇಜುಗಳಿವೆ. ಎಲ್ಲ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕಾಲೇಜು ಶಿಕ್ಷಣ ಇಲಾಖೆ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎ, ಬಿಎಸ್ಸಿ, ಬಿಕಾಂ ಜತೆಗೆ ಒಂದು ವರ್ಷದ ಬಿಎಡ್ ಒಳಗೊಂಡು 4 ವರ್ಷದ ಏಕೀಕೃತ ಕೋರ್ಸ್​ಗಳನ್ನು ಆಯ್ದ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.

ತಾಂತ್ರಿಕ ಮತ್ತು ವ್ಯವಹಾರಿಕಾ ಕೋರ್ಸ್​ಗಳಾದ ಬಿಬಿಎ ಮತ್ತು ಬಿಎಸ್ಸಿ ಪದವಿಗಳಲ್ಲಿ ಅಪ್ರೆಂಟಿಸ್ ಸೌಲಭ್ಯ ಒಳಗೊಂಡ 4 ಏಕೀಕೃತ ಕೋರ್ಸ್​ಗಳನ್ನು ಆರಂಭಿಸಲಾಗುತ್ತಿದೆ. ಇದರಲ್ಲಿ ಒಂದು ಸೆಮಿಸ್ಟರ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದರೆ, ಮತ್ತೊಂದು ಸೆಮಿಸ್ಟರ್​ನಲ್ಲಿ ಕಂಪನಿಯಲ್ಲಿ ಅಪ್ರೆಂಟಿಸ್ ಮಾಡುವ ಸೌಲಭ್ಯವಿರುತ್ತದೆ. ಈ ಕೋರ್ಸ್ ಆರಂಭಿಸಲು ಶಿಕ್ಷಣ ಇಲಾಖೆಗೆ 2 ಲಕ್ಷ ರೂ.ಗಳನ್ನು ಠೇವಣಿಯಾಗಿ ಇಡಬೇಕು. ಹಾಗಾಗಿ ಈ ಕೋರ್ಸ್ ಅನ್ನು ನಗರದ ಆರ್.ಸಿ. ಕಾಲೇಜಿನಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಈಗ ವಿಜಯನಗರ ಶಾಸಕ ಎಂ. ಕೃಷ್ಣಪ್ಪ 2 ಲಕ್ಷ ರೂ. ಠೇವಣಿ ಇಡಲು ಒಪ್ಪಿಕೊಂಡಿರುವುದರಿಂದ ವಿಜಯನಗರ ಕಾಲೇಜಿನಲ್ಲೂ ಈ ಕೋರ್ಸ್ ಆರಂಭಿಸಲಾಗುವುದು ಎಂದು ಹೇಳಿದರು.

ಇಗ್ನೋ ಪ್ರಾದೇಶಿಕ ನಿರ್ದೇಶಕ ಪ್ರೊ. ಇಮ್ಲಾಪುರ, ಜಿಲ್ಲಾ ಉದ್ಯೋಗ ಮಾಹಿತಿ ಕೇಂದ್ರದ ವಿಶೇಷಾಧಿಕಾರಿ ನಾರಾಯಣ ಪ್ರಸಾದ್, ರೋಟರಿ ಲಯನ್ಸ್ ಸಂಸ್ಥೆಯ ಪಿ. ಉಮೇಶ್, ಡಾ. ನಂದಗೋಪಾಲ್, ಕಾಲೇಜು ಸಮಿತಿ ಅಧ್ಯಕ್ಷ ಶ್ರೀನಿವಾಸ್, ಪ್ಲೇಸ್​ವೆುಂಟ್ ಸೆಲ್​ನ ಅಧಿಕಾರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

2 ಸಾವಿರ ವಿದ್ಯಾರ್ಥಿಗಳ ನೋಂದಣಿ

ಉದ್ಯೋಗ ಮೇಳದಲ್ಲಿ 110ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಪಾಲ್ಗೊಂಡಿದ್ದವು. 115 ಕಾಲೇಜು

ಗಳ ವಿದ್ಯಾರ್ಥಿಗಳು ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಜತೆಗೆ ಪದವಿ ಶಿಕ್ಷಣದ ಕೊನೇ ಸೆಮಿಸ್ಟರ್ ಮತ್ತು ಉತ್ತೀರ್ಣರಾದವರು ಸೇರಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರಲ್ಲಿ ಸೇರಿರುವುದಾಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಕೌಶಲ ಹೊಂದಿದ ವಿದ್ಯಾರ್ಥಿಗಳಿದ್ದು, ಖಾಸಗಿ ಸಂಸ್ಥೆಗಳಲ್ಲಿ ದಕ್ಷತೆಯಿಂದ ಕೆಲಸ ಮಾಡುವ ಕ್ಷಮತೆ ಹೊಂದಿದ್ದಾರೆ. ಆದ್ದರಿಂದ ವಿಜಯನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಇನ್ನು ಮುಂದೆ ಪ್ರತಿ ವರ್ಷ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. | ಎಂ. ಕೃಷ್ಣಪ್ಪ ವಿಜಯನಗರ ಶಾಸಕ