ಜಿಲ್ಲೆ

ಆರ್​ಟಿಪಿಸಿಆರ್ ಲ್ಯಾಬ್​ನಲ್ಲಿ 4 ಲಕ್ಷಕ್ಕೂ ಹೆಚ್ಚು ಟೆಸ್ಟ್ ; 3 ಶಿಫ್ಟ್​ಗಳಲ್ಲಿ 23 ಸಿಬ್ಬಂದಿ ಸೇವೆ

Tumakuru

ತುಮಕೂರು : ಕರೊನಾ ಸೋಂಕು ದೃಢಪಡಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಯಲ್ಲೇ ಆರಂಭಿಸಿರುವ ಆರ್​ಟಿಪಿಸಿಆರ್ ಲ್ಯಾಬ್​ಗೆ ವರ್ಷ ತುಂಬಿದೆ. 24/7 ಕಾರ್ಯನಿರ್ವಹಿಸಲಿರುವ ಈ ಪ್ರಯೋಗಾಲಯದಲ್ಲಿ ಕಳೆದೊಂದು ವರ್ಷದಿಂದ ಕೈಗೊಂಡಿರುವ ಟೆಸ್ಟ್​ಗಳ ಸಂಖ್ಯೆ 4,19,216.

ಕಳೆದ ವರ್ಷ ಮಾರ್ಚ್​ನಲ್ಲಿ ಕರೊನಾ ಮೊದಲನೇ ಅಲೆ ಜಿಲ್ಲೆಗೆ ಅಪ್ಪಳಿಸಿದ ಸಂದರ್ಭದಲ್ಲಿ ಕರೊನಾ ಪರೀಕ್ಷೆಗಳಿಗಾಗಿ ಬೆಂಗಳೂರು, ಹಾಸನವನ್ನು ಆಶ್ರಯಿಸಲಾಗಿತ್ತು. ಈ ವೇಳೆ ಕರೊನಾ ಟೆಸ್ಟ್ ಮಾಡಲು ಅತ್ಯಾಧುನಿಕ ಆರ್​ಟಿಪಿಸಿಆರ್ ಪ್ರಯೋಗಾಲಯವನ್ನು 1 ಕೋಟಿ ರೂ., ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮೇ 29 ರಂದು ಪ್ರಾರಂಭಿಸಲಾಯಿತು.

ಪ್ರತಿನಿತ್ಯ 2500 ಟೆಸ್ಟ್ !: ಲ್ಯಾಬ್ ಆರಂಭದಲ್ಲಿ ಪ್ರತಿದಿನ 280 ಟೆಸ್ಟ್​ಗಳನ್ನು ಮಾಡಲಾಗುತ್ತಿತ್ತು. ಈಗ ಈ ಸಂಖ್ಯೆ 2500ಕ್ಕೇರಿದೆ. ಗಂಟಲು ದ್ರವ ಸಂಗ್ರಹಿಸಿದ 33 ಗಂಟೆಗಳಲ್ಲೇ ಕರೊನಾ ಪರೀಕ್ಷಾ ವರದಿ ಕೈಗೆ ಸಿಗಲಿದೆ. 24/7 ಈ ಲ್ಯಾಬ್ ಕಾರ್ಯನಿರ್ವಹಿಸಲಿದ್ದು ಮೂವರು ಮೈಕ್ರೋಬಯೋಲಜಿಸ್ಟ್ ಸೇರಿ 23 ಮಂದಿ ಸಿಬ್ಬಂದಿ ಕಳೆದೊಂದು ವರ್ಷದಿಂದ ಹಗಲಿರುಳು ಸಮರ್ಪಣಾಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ.

4 ಲಕ್ಷಕ್ಕೂ ಹೆಚ್ಚು ಟೆಸ್ಟ್ !: ಆರ್​ಟಿಪಿಸಿಆರ್ ಪ್ರಯೋಗಾಲಯದಲ್ಲಿ 1 ವರ್ಷದಲ್ಲಿ 4,19,216 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 44724 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ, 3,74,492 ಜನರ ವರದಿ ನೆಗೆಟಿವ್ ಬಂದಿದೆ. ಕರೊನಾ ಪರೀಕ್ಷೆ ವೇಳೆ ಸುರಕ್ಷಿತ ಕ್ರಮದ ಹೊರತಾಗಿಯೂ ಪ್ರಯೋಗಾಲಯದ 8 ಮಂದಿ ಸಿಬ್ಬಂದಿಗೂ ಕೂಡ ಸೋಂಕು ತಗುಲಿತ್ತು. ಜಿಲ್ಲಾ ಆಸ್ಪತ್ರೆಯ ಆರ್​ಟಿಪಿಸಿಆರ್ ಕೇಂದ್ರದ ಒತ್ತಡದ ಪರಿಣಾಮ ವಾರವಾದರೂ ಕೋವಿಡ್ ಪರೀಕ್ಷಾ ವರದಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ತಿಪಟೂರಿನಲ್ಲಿ ನವೆಂಬರ್​ನಲ್ಲಿ ಎರಡನೇ ಪ್ರಯೋಗಾಲಯವನ್ನು ಪ್ರಾರಂಭಿಸಲಾಯಿತು. ಇಷ್ಟಾದರೂ 2ನೇ ಅಲೆ ಆರ್ಭಟದ ವೇಳೆ ಲ್ಯಾಬ್ ಸಿಬ್ಬಂದಿ ರಜೆಯೂ ಇಲ್ಲದೆ ಎರಡು ತಿಂಗಳಿನಿಂದ ಹಗಲಿರುಳು ಕಾರ್ಯನಿರ್ವಹಿಸಿ ಹೈರಾಣಾಗಿ ಹೋಗಿದ್ದಾರೆ.

ಮಕ್ಕಳು, ಮನೆಯವರೊಂದಿಗೆ ಅಂತರ ಕಾಯ್ದುಕೊಂಡು ಜೀವಭಯದಲ್ಲೇ ಪ್ರಯೋಗಾಲಯದಲ್ಲಿ 3 ಶಿಫ್ಟ್​ಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕಾರ್ಯ ಶ್ಲಾಘನೀಯವೆನಿಸಿದೆ. ಮಂಚೂಣಿ ಆರೋಗ್ಯ ಕಾರ್ಯಕರ್ತರೆನಿಸಿರುವ ಲ್ಯಾಬ್ ಟೆಕ್ನಿಷಿಯನ್​ಗಳಿಗೆ ರಾಜ್ಯ ಸರ್ಕಾರ ಕಳೆದ ವರ್ಷ ಘೊಷಿಸಿದ್ದ ವಿಶೇಷ ಭತೆ್ಯ ಕೂಡ ಇನ್ನೂ ತಲುಪದೇ ಇರುವುದು ವಿಪರ್ಯಾಸವೆನಿಸಿದೆ.

ಆರ್​ಟಿಪಿಸಿಆರ್ 23 ಸಿಬ್ಬಂದಿ : ಜಿಲ್ಲಾ ಆಸ್ಪತ್ರೆಯ ಆರ್​ಟಿಪಿಸಿಆರ್ ಲ್ಯಾಬ್​ನಲ್ಲಿ ಮೂವರು ಮೈಕ್ರೋಬಯಲಾಜಿಸ್ಟ್, ಓರ್ವ ಹಿರಿಯ ಲ್ಯಾಬ್ ಟೆಕ್ನಿಷಿಯನ್, 15 ಲ್ಯಾಬ್ ಟೆಕ್ನಿಷಿಯನ್​ಗಳು, ಇಬ್ಬರು ಡೇಟಾ ಎಂಟ್ರಿ ಆಪರೇಟರ್, ಇಬ್ಬರು ಡಿ-ಗ್ರೂಪ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪೈಕಿ ಮೈಕ್ರೋ ಬಯಾಲಜಿಸ್ಟ್ ಸೇರಿ 8 ಮಂದಿಗೆ ಕರೊನಾ ಸೋಂಕು ತಗುಲಿತ್ತು.

ತಿಪಟೂರಲ್ಲಿ ಆರ್​ಟಿಪಿಸಿಆರ್ ಲ್ಯಾಬ್ : ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲ ಆರ್​ಟಿಪಿಸಿಆರ್ ಲ್ಯಾಬ್ ಆರಂಭಗೊಂಡ ಬಳಿಕ ನವೆಂಬರ್​ನಲ್ಲಿ ತಿಪಟೂರಲ್ಲಿ ಲ್ಯಾಬ್ ಪ್ರಾರಂಭಿಸಲಾಯಿತು. ಈವರೆಗೆ 69797 ಕೋವಿಡ್ ಟೆಸ್ಟ್​ಗಳನ್ನು ಮಾಡಲಾಗಿದ್ದು 10691 ಜನರಲ್ಲಿ ಸೋಂಕು ದೃಢಪಟ್ಟಿತ್ತು. 58871 ವರದಿ ನೆಗಟಿವ್ ಇದೆ. ಈ ಲ್ಯಾಬ್​ನಲ್ಲಿ ಒಬ್ಬರು ಮೈಕ್ರೋಬಯಲಾಜಿಸ್ಟ್, 12 ಲ್ಯಾಬ್ ಟೆಕ್ನಿಷಿಯನ್, ಇಬ್ಬರು ಡೇಟಾ ಎಂಟ್ರಿ ಆಪರೇಟರ್, 1 ಡಿ-ಗ್ರೂಪ್ ಸಿಬ್ಬಂದಿ ಇದ್ದಾರೆ. ಶಿರಾದಲ್ಲೂ ಆರ್​ಟಿಪಿಸಿಆರ್ ಲ್ಯಾಬ್ ಅನ್ನು ಶೀಘ್ರ ಪ್ರಾರಂಭಿಸಲು ಸಿದ್ಧತೆ ನಡೆದಿದೆ.

ಜಿಲ್ಲಾ ಆಸ್ಪತ್ರೆಯಲ್ಲಿನ ಆರ್​ಟಿಪಿಸಿಆರ್ ಕೇಂದ್ರಕ್ಕೆ 1 ವರ್ಷ ತುಂಬಿದೆ. ಕೋವಿಡ್ ಟೆಸ್ಟ್ ಒತ್ತಡವನ್ನು ಕಡಿಮೆ ಮಾಡಲು ತಿಪಟೂರಿನಲ್ಲಿ 2ನೇ ಲ್ಯಾಬ್ ತೆರೆಯಲಾಯಿತು. ನಂತರ ಈಗ ಶಿರಾದಲ್ಲಿ ಮತ್ತೊಂದು ಲ್ಯಾಬ್  ಆರಂಭಿಸಲಾಗುತ್ತಿದೆ. | ಡಾ.ನಾಗೇಂದ್ರಪ್ಪ ಜಿಲ್ಲಾ ಆರೋಗ್ಯಾಧಿಕಾರಿ