ಜಿಲ್ಲೆ

ಶೇ.100 ತೆರಿಗೆ ವಸೂಲಿ ಗುರಿ ಸಾಧಿಸಿದ 4 ಗ್ರಾಪಂ

ಕುಂದಾಪುರ: ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಕಳೆದ ವರ್ಷ ತೆರಿಗೆ ವಸೂಲಿಯಲ್ಲಿ ಒಟ್ಟು 60 ಗ್ರಾ.ಪಂ.ಗಳ ಪೈಕಿ 4 ಪಂಚಾಯಿತಿಗಳಷ್ಟೇ ಶೇ.100 ಗುರಿ ಸಾಧನೆ ಮಾಡಿವೆ.

ಜಿಲ್ಲೆಯಲ್ಲಿ ಅತಿದೊಡ್ಡ ತಾಲೂಕಾದ ಕುಂದಾಪುರ ತಾಲೂಕಿನ 45 ಪಂಚಾಯಿತಿಗಳಲ್ಲಿ 30 ಪಂಚಾಯಿತಿಗಳು ಶೇ.80 ಮೀರಿದ ಗುರಿ ಸಾಧನೆ ಮಾಡಿವೆ. ಕೊರ್ಗಿ, ಯಡಮೊಗೆ, ಇಡೂರು ಕುಂಜ್ಞಾಡಿ ಪಂಚಾಯಿತಿ ಶೇ.100 ಗುರಿ ತಲುಪಿವೆ. ಗೋಪಾಡಿ, ಬಳ್ಕೂರು, ಚಿತ್ತೂರು, ಮೊಳಹಳ್ಳಿ, ಆಲೂರು, ವಂಡ್ಸೆ, ಹಾರ್ದಳ್ಳಿ ಮಂಡಳ್ಳಿ, ಹಾಲಾಡಿ, ಅಂಪಾರು, ಹೊಂಬಾಡಿ ಮಂಡಾಡಿ, ಬಸ್ರೂರು, ಹಕ್ಲಾಡಿ, ಕಕುರ್ಂಜೆ, ಕೋಣಿ ಗ್ರಾಪಂಗಲು ಶೇ.90 ಗುರಿ ದಾಟಿವೆ. 10 ಪಂಚಾಯಿತಿಗಳು ಶೇ.70, 3 ಪಂಚಾಯಿತಿಗಳು ಶೇ.60 ಗುರಿ ಸಾಧಿಸಿವೆ. ಹಟ್ಟಿಯಂಗಡಿ ಹಾಗೂ ಕಾವ್ರಾಡಿ ಗ್ರಾಪಂಗಳು ಕೇವಲ ಶೇ.50 ತೆರಿಗೆ ಗುರಿ ಸಾಧಿಸಿವೆ.

ಬೈಂದೂರು ತಾಲೂಕು: ಬೈಂದೂರು ತಾಲೂಕಿನ 15 ಗ್ರಾ.ಪಂ.ಗಳಲ್ಲಿ ಶೇ.83.4ರಷ್ಟು ತೆರಿಗೆ ಸಂಗ್ರಹವಾಗಿದೆ. ನಾಡ ಗ್ರಾ.ಪಂ. ಶೇ.100 ತೆರಿಗೆ ಸಂಗ್ರಹ ಸಾಧನೆ ಮಾಡಿದೆ. ಶೇ.60ಕ್ಕಿಂತ ಕಡಿಮೆ ಸಾಧನೆ ಮಾಡಿದ ಪಂಚಾಯಿತಿಗಳೇ ತಾಲೂಕಿನಲ್ಲಿ ಇಲ್ಲ. ಉಪ್ಪುಂದ ಗ್ರಾಪಂ ಕನಿಷ್ಠ ಶೇ.61 ತೆರಿಗೆ ಸಂಗ್ರಹಿಸಿದೆ. 3 ಪಂಚಾಯಿತಿಗಳು ಶೇ.90ಕ್ಕಿಂತ ಹೆಚ್ಚು, 8 ಪಂಚಾಯಿತಿಗಳು ಶೇ.80ಕ್ಕಿಂತ ಹೆಚ್ಚು ತೆರಿಗೆ ವಸೂಲಿ ಮಾಡಿವೆ. ಕೊಲ್ಲೂರು ಪಂಚಾಯಿತಿ ಶೇ.79 ವಸೂಲಿ ಮಾಡಿದೆ.

ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ?

ದುಬಾರಿ ಶುಲ್ಕ ವಿಧಿಸಿ ಶಿಕ್ಷಣ ನೀಡುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ಬಾಕಿ ಇರಿಸಿಕೊಂಡ ಕಾರಣ ನಿರೀಕ್ಷಿತ ಪ್ರಮಾಣದ ಸಂಗ್ರಹವಾಗಿಲ್ಲ. ಪಂಚಾಯಿತಿಗಳಿಗೆ ಲಕ್ಷಾಂತರ ರೂ. ಬಾಕಿ ಇಟ್ಟ ಕಾರಣ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕಾದ ಅನುದಾನಕ್ಕೂ ಕೊರತೆಯಾದಂತಾಗಿದೆ. ಈ ಸಂಸ್ಥೆಗಳು ಸರ್ಕಾರದಿಂದ ಸೂಕ್ತ ರಿಯಾಯಿತಿ ಇದ್ದರೆ ಅದನ್ನು ಪಡೆಯಲೂ ಕ್ರಮ ವಹಿಸಿಲ್ಲ, ಇತ್ತ ತೆರಿಗೆಯೂ ಕಟ್ಟಿಲ್ಲ. ಇದರಿಂದಾಗಿ ಪಂಚಾಯಿತಿಗಳ ಆದಾಯಕ್ಕೆ ಕೊರತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಬೈಂದೂರು ತಾಲೂಕು ತೆರಿಗೆ ವಸೂಲಿಯಲ್ಲಿ ಮುಂಚೂಣಿಯಲ್ಲಿದೆ. ಕುಂದಾಪುರದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ, ಶಿಕ್ಷಣ ಸಂಸ್ಥೆಗಳು ಬಾಕಿ ಇಟ್ಟ ಕಾರಣದಿಂದ ಹಿನ್ನಡೆಯಾಗಿದೆ. ಮುಂದಿನ ದಿನದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಡಾ.ರವಿಕುಮಾರ್ ಹುಕ್ಕೇರಿ, ತಾಪಂ.ಕಾರ್ಯನಿರ್ವಹಣಾಧಿಕಾರಿ ಕುಂದಾಪುರ/ಬೈಂದೂರು https://www.vijayavani.net/womens-day-anganwadi-workers-honored https://www.vijayavani.net/severe-punishment-for-drug-use