ಜಿಲ್ಲೆ

ನ.14ರಿಂದ ಜಿಕೆವಿಕೆಯಲ್ಲಿ 4 ದಿನ ಕೃಷಿ ಮೇಳ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿವರ್ಷ ಹಮ್ಮಿಕೊಳ್ಳುವ ವಾರ್ಷಿಕ ಕೃಷಿ ಮೇಳ ಈ ಬಾರಿ ನ.14ರಿಂದ 17ರ ವರೆಗೆ ನಾಲ್ಕು ದಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯಲಿದೆ. ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಘೋಷವಾಕ್ಯ ಅಡಿಯಲ್ಲಿ ಆಯೋಜಿಸಲಿರುವ ಈ ಮೇಳದಲ್ಲಿ ನಾಲ್ಕು ಹೊಸ ತಳಿ ಹಾಗೂ 19 ತಾಂತ್ರಿಕತೆಯನ್ನು ಬಿಡುಗಡೆ ಮಾಡಲಾಗುತ್ತದೆ.

ಕೃಷಿಯಲ್ಲಿ ಯಾಂತ್ರೀಕರಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಸ್ಟಾರ್ಟಪ್ ಹಾಗೂ ಡಿಜಿಟಲ್ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ತಂತ್ರಜ್ಞಾನ ಆಧಾರಿತ, ಹವಾಮಾನ ಚತುರ ಕೃಷಿ, ಸಾವಯವ ಕೃಷಿ, ಡ್ರೋನ್ ತಂತ್ರಜ್ಞಾನ, ಬರ ನಿರೋಧಕ ಗುಣವುಳ್ಳ ಬೆಳೆಗಳನ್ನು ಬೆಳೆಯುವ ಕೃಷಿ ವಿಧಾನದ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದ್ದಾರೆ.

ಡಿಜಿಟಲ್ ಕೃಷಿ ಜತೆಗೆ ಹೈನುಗಾರಿಕೆ ಒಳಗೊಂಡ ಪಶುಸಂಗೋಪನೆಗೆ ಒತ್ತು ನೀಡಲು ಜಾನುವಾರುಗಳ ಪ್ರದರ್ಶನ ಹಾಗೂ ಅವುಗಳನ್ನು ಆರೈಕೆ ಮಾಡುವ ಹೊಸ ವಿಧಾನಗಳನ್ನು ರೈತರು ಹಾಗೂ ಸಾರ್ವಜನಿಕರಿಗೆ ತಿಳಿಸುವ ಯತ್ನ ಕೂಡ ನಡೆಯಲಿದೆ ಎಂದು ಕುಲಪತಿಯವರು ತಿಳಿಸಿದ್ದಾರೆ.

ಕೃಷಿ ಮೇಳದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು ದೂ: 080 - 23638883/23330153 ಸಂಪರ್ಕಿಸಬಹುದು ಎಂದು ವಿವಿಯ ವಿಸ್ತರಣಾ ನಿರ್ದೇಶಕರು ಕೋರಿದ್ದಾರೆ.