ಚಿತ್ರದುರ್ಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಾದ್ಯಂತ ಕೈಗೊಳ್ಳಲಿರುವ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿ, ಆಯೋಗ ಸಮೀಕ್ಷೆ ಪ್ರಕ್ರಿಯೆ ಆರಂಭಿಸಿದೆ. ಜಿಲ್ಲೆಯಲ್ಲಿ ಅಂದಾಜು 4.5 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕು. ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರ ಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.
ಎಲ್ಲ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕದ ಆರ್‌ಆರ್ ಮೀಟರ್ ಆಧಾರದಲ್ಲಿ ಮನೆಗಳನ್ನು ಗುರುತಿಸಿ, ನಿವಾಸಿಗಳ ಸಮೀಕ್ಷೆ ಮಾಡಬೇಕು. ಮೊದಲ ಹಂತದಲ್ಲಿ ವಿದ್ಯುತ್ ಮೀಟರ್ ರೀಡರ್‌ಗಳಿಂದ ಮನೆಗಳ ಪಟ್ಟಿ ಮಾಡಿ, ಮನೆಗಳಿಗೆ ಜಿಯೋ ಟ್ಯಾಗಿಂಗ್ ಸ್ಟಿಕರ್ ಅಳವಡಿಸಲಾಗುತ್ತಿದೆ. ಸಮೀಕ್ಷೆ ಮುಗಿಯುವವರೆಗೂ ಸಾರ್ವಜನಿಕರು ತಮ್ಮ ಮನೆಗಳಿಗೆ ಅಂಟಿಸಿರುವ ಸ್ಟಿಕರ್ ತೆಗೆಯಬಾರದು ಎಂದರು.
ಜಿಲ್ಲೆಯಲ್ಲಿ ಅನಧಿಕೃತ ಕಟ್ಟಡಗಳು, ಸ್ಲಂ ಮತ್ತಿತರ ಪ್ರದೇಶಗಳಲ್ಲಿ ಆರ್‌ಆರ್ ನಂಬರ್ ಹೊಂದಿರದ 60-70 ಸಾವಿರ ಕುಟುಂಬಗಳೂ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ. ಇವುಗಳ ಪ್ರತ್ಯೇಕ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಾಡಿ ಕೊಳ್ಳಬೇಕು.
ದಸರಾ ರಜೆ ಅವಧಿಯಲ್ಲಿ ಸಮೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 22ರಿಂದ ಆರಂಭವಾಗಿ ಅಕ್ಟೋಬರ್ 7ರೊಳಗೆ ಪೂರ್ಣಗೊಳಿಸುವ ಗುರಿ ಇದೆ. ಸಮೀಕ್ಷೆಗೆ ಶಿಕ್ಷಕರನ್ನು ನಿಯೋಜಿಸಲಾಗಿದೆ. ಅಂದಾಜು 65 ಪ್ರಶ್ನೆಗಳಿರುವ ವಿಶೇಷ ಆ್ಯಪ್ ಮೂಲಕವೇ ಸಮೀಕ್ಷೆ ನಡೆಸಬೇಕು. ಪ್ರತಿ ಸಮೀಕ್ಷೆದಾರ ಕನಿಷ್ಠ 80-100 ಮನೆಗಳಿಗೆ ಖುದ್ದು ಭೇಟಿ ಮಾಡಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಲಭ್ಯವಿರುವ 6 ಸಾವಿರ ಶಿಕ್ಷಕರ ಹೆಸರು, ಕೆಜಿಐಡಿ ನಂಬರ್, ಮೊಬೈಲ್ ನಂಬರ್ ಸಹಿತ ವಿವರವನ್ನು ಗ್ರಾಪಂವಾರು ಹಾಗೂ ಕ್ಲಸ್ಟರ್‌ವಾರು ಸಲ್ಲಿಸಬೇಕು. 50 ಸಮೀಕ್ಷೆದಾರರಿಗೆ ಒಬ್ಬರು ಮಾಸ್ಟರ್ ಟ್ರೈನರ್/ಮೇಲ್ವಿಚಾರಕರನ್ನು ನೇಮಿಸುವಂತೆ ಡಿಡಿಪಿಐ ಎಂ.ಆರ್.ಮಂಜುನಾಥ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಮೀಕ್ಷೆಗೆ ಸಹಕಾರ ತೋರದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಮೀಕ್ಷೆ ಮಾರ್ಗಸೂಚಿಗಳನ್ನು ಅಧಿಕಾರಿ, ಸಿಬ್ಬಂದಿಗೆ ತಲುಪಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ ಅವರಿಗೆ ಸೂಚಿಸಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಶಿ, ಡಿಯುಡಿಸಿ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್,ಬೆಸ್ಕಾಂ ಇಇ ತಿಮ್ಮರಾಯ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಇತರರು ಇದ್ದರು.
ವಸತಿ ಶಾಲೆ ವಿದ್ಯಾರ್ಥಿಗಳನ್ನು ಉತ್ತಮವಾಗಿ ನೋಡಿಕೊಳ್ಳಿ
ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್)ವ್ಯಾಪ್ತಿಯ ಮುರಾರ್ಜಿ ದೇಸಾಯಿ, ಇಂದಿರಾಗಾಂಧಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳೆಡೆ ವಿಶೇಷ ಕಾಳಜಿವಹಿಸುವ ಮೂಲಕ ಅವರನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ಡಿಸಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಕ್ರೈಸ್ ವಸತಿ ಶಾಲೆ, ಕಾಲೇಜುಗಳ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಸಣ್ಣಪುಟ್ಟ ವ್ಯತ್ಯಾಸಗಳಾದರೂ ಪಾಲಕರಿಗೆ ಮಾಹಿತಿ ನೀಡಬೇಕು ಎಂದರು.
ಪ್ರಾಂಶುಪಾಲರು, ನಿಲಯ ಪಾಲಕರು ಹಾಗೂ ಸಿಬ್ಬಂದಿ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರವೇಶಾತಿಗೆ ಸಂಬಂಧಿಸಿದಂತೆ ಗೊಂದಲ ಇರಬಾರದು. ಖಾಲಿ ಇರುವ ಸೀಟುಗಳ ಮಾಹಿತಿಯನ್ನು ಉಪವಿಭಾಗಾಧಿಕಾರಿಗೆ ನೀಡಬೇಕು. ಪ್ರಾಚಾರ್ಯರು ಕಡ್ಡಾಯವಾಗಿ ವಸತಿ ಶಾಲೆಯಲ್ಲೇ ವಾಸ್ತವ್ಯ ಇರಬೇಕು. ಉತ್ತಮ ಫಲಿತಾಂಶ, ಶಾಲೆ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಶುಚಿ-ರುಚಿಯೊಂದಿಗೆ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೆಕು ಎಂದರು. ಸಮಾಜ ಕಲ್ಯಾಣ ಇಲಾಖೆ ಡಿಡಿ ಮಲ್ಲಿಕಾರ್ಜುನ್ ಇತರರು ಇದ್ದರು.
---------------
1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ
-----------
ಈ ಮೊದಲು ತಹಸೀಲ್ದಾರ್‌ಗೆ ಇದ್ದ ಪಹಣಿ ಲೋಪ ದೋಷ ತಿದ್ದುಪಡಿ ಅಧಿಕಾರವನ್ನು ಈಗ ಎಸಿಗೆ ವಹಿಸಲಾಗಿದೆ. ಆರ್‌ಟಿಸಿಯಲ್ಲಿರುವ ಸಣ್ಣಪುಟ್ಟ ದೋಷಗಳಿಂದ ತೊಂದರೆಯಾಗುತ್ತಿದ್ದು, ಸರಿಪಡಿಸಬೇಕೆಂಬ ರೈತರ ಬೇಡಿಕೆ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ತಿದ್ದುಪಡಿ ಅಭಿಯಾನ (ಅಪೀಲು ಪ್ರಕರಣ ಹೊರತುಪಡಿಸಿ)ಕೈಗೊಳ್ಳಲಾಗುತ್ತಿದೆ. ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅರ್ಜಿಗಳನ್ನು ತಹಸೀಲ್ದಾರ್‌ಗಳು ಎಸಿಗೆ ಸಲ್ಲಿಸುತ್ತಾರೆ. ಎಸಿ ತಿದ್ದುಪಡಿಗೆ ಅನುಮೋದಿಸುತ್ತಾರೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೆ.1ರಿಂದ 15 ದಿನಗಳ ಕಾಲ ಪಹಣಿಯಲ್ಲಿರುವ ಸಣ್ಣಪುಟ್ಟ ತಿದ್ದುಪಡಿಗಳಿಗಾಗಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್‌ಗಳಿಗೆ ಅರ್ಜಿ ಸಲ್ಲಿಸಬೇಕೆಂದು ಡಿಸಿ ಟಿ. ವೆಂಕಟೇಶ್ ತಿಳಿಸಿದ್ದಾರೆ.