ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಕರ್ನಾಟಕದ ಆದ್ಯತಾ ವಲಯಕ್ಕೆ 2025-26ನೇ ಆರ್ಥಿಕ ವರ್ಷದಲ್ಲಿ 4.47 ಲಕ್ಷ ಕೋಟಿ ರೂ. ಸಾಲ ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಹೇಳಿದ್ದಾರೆ.
ನಗರದ ನಬಾರ್ಡ್ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸಾಲ ಗೋಷ್ಠಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
2024-25ನೇ ಸಾಲಿನಡಿ 3.97 ಲಕ್ಷ ಕೋಟಿ ರೂ. ಸಾಲ ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ ಮುಂದಿನ ಸಾಲಿಗೆ ಶೇ.12.55 ಹೆಚ್ಚಿದೆ. ವಿವಿಧ ಬ್ಯಾಂಕ್‌ಗಳ ಮೂಲಕ ಈ ಸಾಲ ವಿತರಣೆ ಆಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ಆದ್ಯತಾ ವಲಯಗಳಿಗೆ ಅಗತ್ಯವಿರುವ ಆರ್ಥಿಕ ನೆರವಿನ ಕುರಿತು ನಬಾರ್ಡ್ ಸಿದ್ಧಪಡಿಸಲಾಗಿದೆ ಎಂದರು.
ರೈತರು, ಮಹಿಳೆಯರು, ಎಂಎಸ್‌ಎಂಇ ವಲಯದ ಸಬಲೀಕರಣಕ್ಕೆ ಬ್ಯಾಂಕ್‌ಗಳು ಮತ್ತಷ್ಟು ಆರ್ಥಿಕ ನೆರವು ಒದಗಿಸಲು ಮುಂದಾಗಬೇಕಿದೆ. ಜಲಾನಯನ, ಕೃಷಿ ಮೂಲಸೌಕರ್ಯ, ಎಂಎಸ್‌ಎಂಇ ವಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಬಾರ್ಡ್ ಕಾರ್ಯ ಕೂಡ ಶ್ಲಾಘನೀಯ ಎಂದು ಅವರು ತಿಳಿಸಿದರು.
ಕೃಷಿ ವಲಯಕ್ಕೆ ಹೆಚ್ಚು ಆದ್ಯತೆ:
ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಪ್ರಸಾದ್ ರಾವ್ ಮಾತನಾಡಿ, 2025-26ನೇ ಆರ್ಥಿಕ ವರ್ಷಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಕೃಷಿ ವಲಯಕ್ಕೆ 2.04 ಲಕ್ಷ ಕೋಟಿ ರೂ. ಸಾಲ ಮೀಸಲಿರಿಸಲಾಗಿದೆ. ಎಂಎಸ್‌ಎಂಇ ಕೈಗಾರಿಕೆಗೆ 1.88 ಲಕ್ಷ ಕೋಟಿ ರೂ. ಮತ್ತು ಇತರ ಆದ್ಯತಾ ವಲಯದ ಚಟುವಟಿಕೆಗಳಿಗೆ 56 ಸಾವಿರ ಕೋಟಿ ರೂ. ನಿಗದಿಯಾಗಿದೆ. ಪ್ರಸಕ್ತ ಸಾಲಿನಡಿ ರಾಜ್ಯಕ್ಕೆ 2,056 ಕೋಟಿ ರೂ. ಮೊತ್ತದ ಆರ್‌ಐಡಿಎ್ ನೆರವು ಸೇರಿ 298 ಗ್ರಾಮೀಣ ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಇದೇ ವೇಳೆ ನಬಾರ್ಡ್‌ನಿಂದ ಕೃಷಿ ಕುರಿತು ತಯಾರಿಸಿರುವ ಜೀವ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು. ಆರ್‌ಬಿಐನ ಪ್ರಾದೇಶಿಕ ಕಚೇರಿ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ, ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್ ಇದ್ದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಬಾರ್ಡ್ ಪ್ರಮುಖ ಪಾತ್ರ ವಹಿಸುತ್ತಿದೆ. ಕೃಷಿ ವಲಯದ ಅಭಿವೃದ್ಧಿಗೆ ಬ್ಯಾಂಕ್‌ಗಳು ವಿವಿಧ ಸಾಲ ಸೌಲಭ್ಯ ಕಲ್ಪಿಸುತ್ತಿವೆ.
- ಜೂಹಿ ಸ್ಮಿತಾ ಸಿನ್ಹಾ, ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕಿ