ಜಿಲ್ಲೆ

ರಸ್ತೆ, ಚರಂಡಿ ನಿರ್ಮಾಣಕ್ಕೆ 4.30 ಕೋಟಿ ರೂ. ನಿಗದಿ

ಶಿಗ್ಗಾಂವಿ: ಪಟ್ಟಣದ ರಸ್ತೆಗಳ ನಿರ್ವಹಣೆ, ಪುರಸಭೆ ಕಚೇರಿ ಕಟ್ಟಡ ನಿರ್ವಣಕ್ಕಾಗಿ 1 ಕೋಟಿ ರೂ., ರಸ್ತೆ ನಿರ್ವಣಕ್ಕಾಗಿ 2.50 ಕೋಟಿ ರೂ., ಚರಂಡಿ ನಿರ್ವಣಕ್ಕಾಗಿ 1.80 ಕೋಟಿ ರೂ. ವ್ಯಯಿಸಲು ನಿರ್ಧರಿಸಿರುವ ಬಜೆಟ್ ಮಂಡಿಸಲಾಗಿದೆ.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಗುರುವಾರ 2025-26ನೇ ಸಾಲಿನ ಬಜೆಟ್ ಮಂಡಿಸಿದರು. ಒಟ್ಟು 26.77 ಕೋಟಿ ರೂ.ಆದಾಯ ಹಾಗೂ 26.54 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, 22.50 ಲಕ್ಷ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ.

ಆಸ್ತಿ ತೆರಿಗೆ ಆದಾಯದಿಂದ 1.25 ಕೋಟಿ ರೂ., ಅಭಿವೃದ್ಧಿ ಮತ್ತು ಕಟ್ಟಡದ ಅನುಮತಿ ಶುಲ್ಕದಿಂದ 45 ಲಕ್ಷ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 18 ಲಕ್ಷ ರೂ., ಅಂಗಡಿಗಳ ಲೈಸೆನ್ಸ್ 8 ಲಕ್ಷ ರೂ., ಮಾರುಕಟ್ಟೆ ಶುಲ್ಕದಿಂದ 15 ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆ ಶುಲ್ಕದಿಂದ 12 ಲಕ್ಷ ರೂ., ನೀರು ಸರಬರಾಜು 70 ಲಕ್ಷ ರೂ., ಉತಾರ, ಖಾತಾ ಬದಲಾವಣೆ ಇತ್ಯಾದಿಗಳಿಂದ 24.50 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.

ಸಿಬ್ಬಂದಿ ವೇತನ ಹಾಗೂ ಕಲ್ಯಾಣ ವೆಚ್ಚಕ್ಕಾಗಿ 3.10 ಕೋಟಿ ರೂ., ಸಿಬ್ಬಂದಿ ಅಧ್ಯಯನ ಪ್ರವಾಸಕ್ಕಾಗಿ 15 ಲಕ್ಷ ರೂ., ವಾಹನಗಳ ದುರಸ್ತಿಗಾಗಿ 12.55 ಲಕ್ಷ ರೂ., ವಾಹನಗಳ ಇಂಧನಕ್ಕಾಗಿ 20 ಲಕ್ಷ ರೂ., ಕಾನೂನು ವೆಚ್ಚ 2.85 ಲಕ್ಷ ರೂ., ಸಮಲೋಚನಾ ಶುಲ್ಕ 5 ಲಕ್ಷ ರೂ., ಜಾಹೀರಾತು ಹಾಗೂ ಪ್ರಚಾರಕ್ಕಾಗಿ 10 ಲಕ್ಷ ರೂ., ಹೊರಗುತ್ತಿಗೆ ಕಾರ್ವಿುಕರ ವೇತನಕ್ಕೆ 65 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.

ಪಟ್ಟಣದ ಬೀದಿದೀಪ ನಿರ್ವಹಣೆ ಮತ್ತು ಹೊಸ ಬಡಾವಣೆಗಳಿಗೆ ಬೀದಿದೀಪದ ವ್ಯವಸ್ಥೆ ಕಲ್ಪಿಸಲು 1.50 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆ 1 ಕೋಟಿ ರೂ., ಪಟ್ಟಣದಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆ ವಿಸ್ತರಿಸಲು 1.60 ಕೋಟಿ ರೂ., ಪಟ್ಟಣದ ಸೌಂದರ್ಯ ಹೆಚ್ಚಿಸುವ ವಿವಿಧ ಕಾರ್ಯಕ್ರಮಕ್ಕಾಗಿ 6.55 ಲಕ್ಷ ರೂ., ಕೆರೆಗಳ ಅಭಿವೃದ್ಧಿಗಾಗಿ 1.40 ಕೋಟಿ ರೂ. ವ್ಯಯಿಸಲು ಉದ್ದೇಶಿಸಲಾಗಿದೆ. ಹಿಂದುಳಿದ ವರ್ಗದ ಹಾಗೂ ಅಂಗವಿಕಲರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ಧಿಗಾಗಿ 6.13 ಲಕ್ಷ ರೂ. ವ್ಯಯಿಸುವ ಗುರಿ ಹೊಂದಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್., ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ನಡೂರ, ಸುಭಾಸ ಚವ್ಹಾಣ, ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ಗೌಸಖಾನ್ ಮುನಸಿ, ಜಾಫರಖಾನ್ ಪಠಾಣ, ರೂಪಾ ಬನ್ನಿಕೊಪ್ಪ, ಶೇಖವ್ವ ವಡ್ಡರ, ವಸಂತಾ ಬಾಗೂರ, ಸಂಗೀತಾ ವಾಲ್ಮೀಕಿ, ಸುಲೇಮಾನಬಾಷಾ ತರ್ಲಘಟ್ಟ, ಮುಸ್ತಾಕಅಹ್ಮದ ತಹಶೀಲ್ದಾರ ಇತರರಿದ್ದರು.