ಪಿರಿಯಾಪಟ್ಟಣ: ಉಪ್ಪಾರ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ತಾಲೂಕು ವ್ಯಾಪ್ತಿಯಲ್ಲಿ 4.15 ಎಕರೆ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ತಾಲೂಕು ಉಪ್ಪಾರ ಸಮಾಜದ ಮುಖಂಡರು ಶುಕ್ರವಾರ ತಹಸೀಲ್ದಾರ್ ಯದು ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಉಪ್ಪಾರ ಸಮಾಜದವರು ವಾಸಿಸುತ್ತಿದ್ದು 20,000ಕ್ಕೂ ಹೆಚ್ಚು ಮತದಾರರಿದ್ದಾರೆ. ಮೂಲಸೌಲಭ್ಯಗಳ ಕೊರತೆಯಿಂದಾಗಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಉಪ್ಪಾರ ಸಮಾಜ ತಾಲೂಕಿನಲ್ಲಿ ಹಿಂದುಳಿದಿದೆ. ತಾಲೂಕಿನಲ್ಲಿ ಉಪ್ಪಾರ ಸಮಾಜದ ಸಮುದಾಯ ಭವನ ನಿರ್ಮಿಸಲು ಮತ್ತು ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸಲು ತಾಲೂಕಿನ ಕಸಬಾ ಹೋಬಳಿ ಚೌಡೇನಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂ.39 ರಲ್ಲಿನ 4.15 ಎಕರೆ ಸರ್ಕಾರಿ ಬಿ ಖರಾಬು ಜಮೀನನ್ನು ಉಪ್ಪಾರ ಸಮಾಜದ ಅಭಿವೃದ್ಧಿಗೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಉಪ್ಪಾರ ಸಮಾಜದ ಮುಖಂಡ ಪಿ.ಎಸ್.ವಿಷಕಂಠಯ್ಯ ದೂರಿದರು.
ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಿಸಬೇಕು. ಇಲ್ಲದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಮಾಜದ ಮತದಾರರು ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಮಾಜದ ಮುಖಂಡರಾದ ಪಿ.ಟಿ.ವೇಣುಗೋಪಾಲ್, ಜಯಶಂಕರ್, ನಾರಾಯಣ್, ವೀರಭದ್ರ, ಪಿ.ಟಿ. ಲಕ್ಷ್ಮೀನಾರಾಯಣ್, ಪಿ.ಜೆ.ರವಿ, ಮಂಜುನಾಥ್ ಉಪಸ್ಥಿತರಿದ್ದರು.