ಜಿಲ್ಲೆ

3ರಿಂದ 5 ದಿನಗಳ ಕಾಲ ಗಮಕ ಹಬ್ಬ ನಮನ ಕಾರ್ಯಕ್ರಮ

ಹಾಸನ: ನಗರದ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿರುವ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಜನವರಿ 3ರಿಂದ 7ರವರೆಗೆ ಐದು ದಿನಗಳ ಕಾಲ ಗಮಕ ಹಬ್ಬ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಗಮಕ ಕಲಾ ಪರಿಷತ್ತು ಅಧ್ಯಕ್ಷ ಕಲಾಶ್ರೀ ಗಣೇಶ್ ಉಡುಪ ಹೇಳಿದರು.

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಹಾಸನ, ಸಂಸ್ಕಾರ ಭಾರತಿ ಕರ್ನಾಟಕ, ಹಾಸನ ಜಿಲ್ಲಾ ಸಮಿತಿ, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಕವಿ ಕನಕದಾಸ ಮತ್ತು ತತ್ವಪದ ಪದಕಾರರ ಅಧ್ಯಯನ ಸಂಸ್ಥೆ ಬೆಂಗಳೂರು ಹಾಗೂ ಹಾಸನ ನಗರ ಗೃಹ ನಿರ್ಮಾಣ ಸಹಕಾರಿ ಸಂಘ ನಿಯಮಿತ ಇವರ ಸಹಯೋಗದಲ್ಲಿ 5 ದಿನಗಳ ಗಮಕ ಹಬ್ಬ-ಕವಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.3ರಂದು ಸಂಜೆ 5 ಗಂಟೆಗೆ ಹಾಸನ ಜಿಪಂ ಸಿಇಒ ಡಾ.ಬಿ.ಆರ್. ಪೂರ್ಣಿಮಾ ಕಾರ್ಯಕ್ರಮ ಉದ್ಘಾಟಿಸುವರು. ಖ್ಯಾತ ನಟ ಸುಚೇಂದ್ರ ಪ್ರಸಾದ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಪಿ. ತಾರಾನಾಥ್, ಹಾಸನ ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಬಿ.ವಿ. ಶ್ರೀಧರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಮಾರಂಭದಲ್ಲಿ ಗಮಕ ವಿದುಷಿ ರುಕ್ಮಿಣಿ ನಾಗೇಂದ್ರ ಅವರಿಗೆ ‘‘ಗಮಕ ಕಲಾಶ್ರೀ’’ ಬಿರುದನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಸಮಾರೋಪದಲ್ಲಿ ಎಚ್.ಎಸ್. ಮಂಜುನಾಥ ಮೂರ್ತಿ, ವಿದುಷಿ ಭಾರತಿ ಭಟ್, ಗಮಕ ವಿದುಷಿಕಿಯರಾದ ವಾಸುಕಿ ಶರ್ಮ, ಸುಮಿತ್ರಾ ವಿಶ್ವನಾಥ ಹಾಗೂ ಸಾಹಿತಿ ಗೊರೂರು ಅನಂತರಾಜು ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಐದು ದಿನದ ಗಮಕ ಹಬ್ಬ ಕವಿ ನಮನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ಗಮಕ ಕಲಾ ಪರಿಷತ್ತು ಉಪಾಧ್ಯಕ್ಷೆ ರುಕ್ಮಿಣಿ ನಾಗೇಂದ್ರ, ವಿಶ್ವನಾಥ್ ಚವ್ಹಾಣ್, ಕೋಶಾಧಿಕಾರಿ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.