ಹಾಸನ: ಟೈಲರ್ ವೃತ್ತಿ ನಿರ್ವಹಿಸುತ್ತಿರುವವರಿಗೆ ಮತ್ತು ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಸೆ.3 ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಟೈಲರ್ಸ್ ಸಂಘದ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಎಸ್ ವೆಂಕಟೇಶ್ ಹೇಳಿದರು.
ಟೈಲರ್ ವೃತ್ತಿ ನಿರ್ವಹಿಸುವವರು ಕಣ್ಣಿನ, ರಕ್ತದ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಹಾಸನದ ಸಂಸ್ಥೆಗಳಾದ ಜೀವ ಜ್ಯೋತಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್, ಲಯನ್ಸ್ ಕ್ಲಬ್, ಜೀವ ಸಂಜೀವಿನಿ ಬ್ಲಡ್ ಬ್ಯಾಂಕ್, ಶಿವ ಪ್ರಸಾದ್ ನೇತ್ರಾಲಯ, ವಿ ಕೇರ್ ದಂತ ಆಸ್ಪತ್ರೆ ವತಿಯಿಂದ ಟೈಲರ್ ವೃತ್ತಿ ನಿರ್ವಹಿಸುತ್ತಿರುವವರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಇದೇ ಸೆ. 3ರ ಭಾನುವಾರ ನಗರದ ಎಸ್‌ವಿಎಂ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಶಿಬಿರ 10 ಗಂಟೆಗೆ ಆರಂಭವಾಗಲಿದೆ ಎಂದು ತಿಳಿಸಿದರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಬಿರದಲ್ಲಿ ರಕ್ತದೊತ್ತಡದ, ಮಧುಮೇಹ, ಇಸಿಜಿ, ಕಣ್ಣಿನ, ಚರ್ಮ, ದಂತ, ಕೀಲು ಮತ್ತು ಮೂಳೆ ಹಾಗೂ ಇತರೆ ಕಾಯಿಲೆಗಳ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಹೆಚ್ಚಿನ ಪರೀಕ್ಷೆ ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲಾಗುವುದು. ಲಭ್ಯವಿರುವ ಔಷಧವನ್ನು ಉಚಿತವಾಗಿ ನೀಡಲಾಗುವುದು.
ಕಾರ್ಯಕ್ರಮಕ್ಕೆ ಶಾಸಕ ಸ್ವರೂಪ್ ಪ್ರಕಾಶ್, ಕ್ಷೇತ್ರ ಸಮಿತಿ ಎಚ್.ಎಸ್. ವೆಂಕಟೇಶ್, ಜಿಲ್ಲಾಧಿಕಾರಿ ಸಿ ಸತ್ಯಭಾಮಾ, ಕಾರ್ಮಿಕ ಆಧಿಕಾರಿ ಯಮುನಾ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ್ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿಬಿರದ ಆಯೋಜಕರಾದ ಲಕ್ಷ್ಮಣ್ ರಾವ್, ಎಚ್.ಕೆ ನಾಗೇಶ್, ಬಿ.ಎಂ ನಾಗೇಂದ್ರ, ಶಂಕರೇಗೌಡ ಇತರರು ಹಾಜರಿದ್ದರು.