ಕಡೂರು: ಎಮ್ಮೆದೊಡ್ಡಿ ಭಾಗದ ಜ್ವಲಂತ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ಭಾಗದ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಮದಗದ ಕೆರೆಗೆ ಮಂಗಳವಾರ ತಾಲೂಕು ಆಡಳಿತದಿಂದ ಸಂಸದರ ಜತೆಗೂಡಿ ಬಾಗಿನ ಅರ್ಪಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿ, ಮದಗದ ಕೆರೆಗೆ ಹೆಬ್ಬೆ ಜಲಪಾತದಿಂದ ನೀರು ತರುವ ಯೋಜನೆ ತಾಂತ್ರಿಕವಾಗಿ ಕಾರ್ಯಸಾಧುವಲ್ಲದ ಕಾರಣ ಭದ್ರಾ ಉಪಕಣಿವೆ ಯೋಜನೆಯಲ್ಲಿ ಈ ಕೆರೆಯೂ ಸೇರಿದಂತೆ ತಾಲೂಕಿನ 116 ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ದೊರೆಯಿತಾದರೂ ನಿರ್ದಿಷ್ಟ್ಟವಾಗಿ ಅನುದಾನ ಮೀಸಲಿಟ್ಟಿರಲಿಲ್ಲ. ಈ ಯೋಜನೆಯ 2ನೇ ಹಂತದ ಕಾಮಗಾರಿ ಪೂರ್ಣ ಕಡೂರು ತಾಲೂಕಿನಲ್ಲಿ ನಡೆಯುತ್ತದೆ ಎಂದರು.
ಯೋಜನೆಗೆ ನಬಾರ್ಡ್‌ನಿಂದ ಹಣ ತರುವ ಪ್ರಸ್ತಾವನೆ ಮಾಡಿ ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. 400 ಕೋಟಿ ಹಣ ಒಮ್ಮೆಲೆ ಬಿಡುಗಡೆಯಾಗಿದೆ. 2025 ಅಂತ್ಯದೊಳಗೆ ಯೋಜನೆಯ 2ನೇ ಹಂತದಲ್ಲಿ ಒಟ್ಟು 32 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಮುಗಿಸುವ ಮಹತ್ತರ ಜವಾಬ್ದಾರಿ ನನ್ನದಾಗಿದೆ ಎಂದರು.
3ನೇ ಹಂತದ ಕಾಮಗಾರಿ ಬಗ್ಗೆಯೂ ಗಮನ ಹರಿಸಿದ್ದರ ಫಲವಾಗಿ ಡಿಪಿಆರ್ ಮುಗಿದಿದ್ದು ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಒಟ್ಟಾರೆಯಾಗಿ ತಾಲೂಕಿನ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ ಅವರಿಗೆ ನೆಮ್ಮದಿ ಕಲ್ಪಿಸುವ ಆಶಯ ನನ್ನದಾಗಿದ್ದು, ಆ ಕಾರ್ಯದಲ್ಲಿ ಯಶಸ್ವಿಯಾಗಿ ಬರದ ನಾಡು ಹಸಿರು ನಾಡು ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಎಮ್ಮೆದೊಡ್ಡಿ ಭಾಗದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಇಲ್ಲಿ ಅರಣ್ಯ, ಅಮೃತ ಮಹಲ್ ಸಮಸ್ಯೆ ಬಗ್ಗೆ ಗಾಳಿ ಮಾತುಗಳು ಹರಡಿವೆ. ಯಾವುದೇ ಕಾರಣಕ್ಕೂ ಇಲ್ಲಿನ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರೈತರು ಆತಂಕಕ್ಕೊಳಗಾಗುವುದು ಬೇಡ. ಅವರ ಭೂಮಿಯ ರಕ್ಷಣೆ ನನ್ನ ಕರ್ತವ್ಯ ಎಂದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ತಾಲೂಕಿನ ಮದಗದ ಕೆರೆ ಬಯಲುಸೀಮೆ ಭಾಗದ ರೈತರಿಗೆ ಅಕ್ಷಯ ಪಾತ್ರೆಯಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಜತೆಗೂಡಿ ಕಾರ್ಯನಿರ್ವಹಿಸಲಾಗುವುದು ಎಂದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕೆರೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಒತ್ತು ನೀಡಿದ್ದು, ವೈಜ್ಞಾನಿಕವಾಗಿ ಕೆರೆಯ ನೀರನ್ನು ಹಾಯುವಳಿದಾರರು ಬಳಸಿಕೊಂಡರೆ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.
ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಈರಳ್ಳಿ ರಮೇಶ್, ಕೆ.ಎಂ.ಮೋಹನ್‌ಕುಮಾರ್, ಮರಗುದ್ದಿ ಮನು, ಯಾಸೀನ್, ತಾಪಂ ಮಾಜಿ ಸದಸ್ಯರಾದ ಹೊಗರೇಹಳ್ಳಿ ಶಶಿಕುಮಾರ್, ಪಂಚನಹಳ್ಳಿ ಪ್ರಸನ್ನ, ಎಂ.ಎಚ್.ಚಂದ್ರಪ್ಪ, ತಿಮ್ಲಾಪುರ ದಿನೇಶ್, ಪ್ರಕಾಶ್‌ನಾಯ್ಕ, ಕಂಸಾಗರ ಸೋಮಶೇಖರ್, ಕೆ.ಎಚ್. ಶಂಕರ್, ನಾಗಮ್ಮ, ಚಂದ್ರಪ್ಪ, ಆಸಂದಿಕಲ್ಲೇಶ್, ಬಾಸೂರು ಚಂದ್ರಮೌಳಿ ಮತ್ತಿತರರಿದ್ದರು.