ಜಿಲ್ಲೆ

3ನೇ ದಿನಕ್ಕೆ ಕಾಲಿಟ್ಟ ಗ್ರಾಮಿಣ ಅಂಚೆ ನೌಕರರ ಪ್ರತಿಭಟನೆ

ಹಾಸನ: ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಮುಖ್ಯ ಅಂಚೆ ಕಚೇರಿ ಮುಂದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.
ಇದೆ ಸಂದರ್ಭದಲ್ಲಿ ಎಐಜಿಡಿಎಸ್‌ಯು ಸಂಘಟನೆಯ ಜಗದೀಶ್ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಪಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಹಾಸನದ ಪ್ರಧಾನ ಅಂಚೆ ಕಚೇರಿಯ ಮುಂದೆ ಗ್ರಾಮೀಣ ಅಂಚೆ ನೌಕರರು ಎಐಜಿಡಿಎಸ್‌ಯು ಹಾಗೂ ಎನ್‌ಯುಜಿಡಿಎಸ್ ಸದಸ್ಯರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಹೇಳಿದರು.
8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12-24-36 ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡುವುದು, ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ನಿಲ್ಲಿಸುವುದು, ಗುಂಪು ಇನ್ಸೂರೆನ್ಸ್ ಕವರೇಜ್ 5 ಲಕ್ಷ ರೂ. ವರೆಗೆ ಹೆಚ್ಚಿಸುವುದು ಮತ್ತು ಅವೈಜ್ಞಾನಿಕ ಗುರಿ ಸಾಧಿಸದ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವುದು ಹಾಗೂ ಜಿಡಿಎಸ್ ಗ್ರಾಚ್ಯುಟಿ ಹಣವನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸಿ 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಬೇಡಿಕೆ ಆಗಿದೆ ಎಂದು ಹೇಳಿದರು.
ಇದೇ ವೇಳೆ ಎಐಜಿಡಿಎಸ್‌ಯು ಸಂಘಟನೆಯ ಅಧ್ಯಕ್ಷ ಜಿ.ಬಿ. ಕಾಳಿಗೇಗೌಡ, ಕಾರ್ಯದರ್ಶಿ ಕೆ.ಜೆ. ಶಿವಾಜಿ, ಕಾರ್ಯಾಧ್ಯಕ್ಷ ಎಚ್.ಇ. ಜಯಣ್ಣ, ಸಂಘಟನಾ ಕಾರ್ಯದರ್ಶಿ ದಿನೇಶ್, ಮಲ್ಲೇಶ್, ಸತೀಶ್, ವಾಸು, ವಿನೋದ್ ಕುಮಾರ್, ಮಧು, ಎನ್‌ಯುಜಿಡಿಎಸ್‌ಯುನ ವಲಯ ಕಾರ್ಯದರ್ಶಿ ಇತರರು ಭಾಗವಹಿಸಿದ್ದರು.